ADVERTISEMENT

ಭೂಕಂಪ: ಭಯದಲ್ಲೇ ರಾತ್ರಿ ಕಳೆಯುತ್ತಿರುವ ಅಫ್ಗನ್ ಜನರು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 14:45 IST
Last Updated 3 ಸೆಪ್ಟೆಂಬರ್ 2025, 14:45 IST
ಭೂಕಂಪದಿಂದಾಗಿ ನೆಲಸಮವಾದ ಮನೆಯ ಮುಂದೆ ಕೂತಿರುವ ಅಫ್ಘಾನ್ ಯುವಕ (ಎಎಫ್‌ಪಿ ಚಿತ್ರ)
ಭೂಕಂಪದಿಂದಾಗಿ ನೆಲಸಮವಾದ ಮನೆಯ ಮುಂದೆ ಕೂತಿರುವ ಅಫ್ಘಾನ್ ಯುವಕ (ಎಎಫ್‌ಪಿ ಚಿತ್ರ)   

ದರ–ಇ–ನೂರ್, ಅಫ್ಗಾನಿಸ್ತಾನ: ಪೂರ್ವ ಅಫ್ಗಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದಾಗಿ ಹಲವು ಕುಟುಂಬದವರು ನಿರಾಶ್ರಿತರಾಗಿ ಹಸಿವಿನಿಂದ ಬಳಲುತ್ತಿದ್ದಾರೆ. ಮತ್ತೆ ಕುಸಿದೀತು ಎಂಬ ಆತಂಕದಲ್ಲಿ ಅಳಿದುಳಿದ ಕಟ್ಟಡಗಳಿಗೆ ಕಾಲಿಡಲೂ ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ.

ಆರಂಭದಲ್ಲಿ 6.0 ತೀವ್ರತೆಯ ಭೂಕಂಪವು ಪಾಕಿಸ್ತಾನದ ಗಡಿ ಹಂಚಿಕೊಂಡಿರುವ ಪ್ರದೇಶಗಳಲ್ಲಿ ಸಂಭವಿಸಿದ್ದು, 1,400ಕ್ಕೂ ಹೆಚ್ಚು ಜನರು ಮೃತಪಟ್ಟರು. ನಂತರ ಆರು ಬಾರಿ ತೀವ್ರವಾಗಿ ಮತ್ತು ಲೆಕ್ಕವಿಲ್ಲದಷ್ಟು ಬಾರಿ ಸಣ್ಣದಾಗಿ ಭೂಮಿ ಕಂಪಿಸಿದೆ.

ಹಸಿರು ಪರ್ವತಗಳ ನಡುವಿನ ಹಲವು ಕೃಷಿ ಗ್ರಾಮಗಳು ನೆಲಸಮವಾಗಿದ್ದು, ಭೂಕಂಪವಾಗಿ ಹಲವು ದಿನಗಳು ಕಳೆದರೂ ಜನರು ಇನ್ನೂ ಅವಶೇಷಗಳ ಅಡಿಯಲ್ಲಿದ್ದಾರೆ. ಇತರೆಡೆ, ಕೆಲವು ಮನೆಗಳು ಕೇವಲ ಬಾಗಶಃ ಧ್ವಂಸಗೊಂಡಿದ್ದರೂ, ನಿವಾಸಿಗಳು ಅವು ಕುಸಿಯುವ ಭಯದಿಂದಾಗಿ ಹೊರಗಿನ ಕಠಿಣ ವಾತಾವರಣದಲ್ಲೇ ಕಾಲ ಕಳೆಯಲು ಸಿದ್ಧರಾಗಿದ್ದಾರೆ. 

ADVERTISEMENT

ಭೂಕಂಪ‍ದಿಂದಾಗಿ ತಮ್ಮ ಮನೆ ನಾಶವಾದ ಆ ಭಯಾನಕ ರಾತ್ರಿ ಇನ್ನೂ ಕಾಡುತ್ತಿದೆ ಎಂದು ನಂಗರಹಾರ್‌ ಪ್ರಾಂತ್ಯದ ದರ–ಇ–ನೂರ್‌ನ ಗ್ರಾಮದ ಇಮ್ರಾನ್ ಮೊಹಮ್ಮದ್ ಆರಿಫ್ ಹೇಳುತ್ತಾರೆ. ಅವರಿನ್ನೂ ತಮ್ಮ ಕುಟುಂಬದ ನಾಲ್ವರು ಸದಸ್ಯರೊಂದಿಗೆ ಪ್ಲಾಸ್ಟಿಕ್ ಬಿಡಾರದಲ್ಲೇ ರಾತ್ರಿ ಕಳೆಯುತ್ತಿದ್ದಾರೆ. ‘ನಿನ್ನೆ ಮತ್ತು ಇಂದು ಬೆಳಿಗ್ಗೆ ಕೂಡ ಭೂಮಿ ಕಂಪಿಸಿದೆ. ಈಗ ನಮಗೆ ವಾಸಿಸಲು ಸ್ಥಳವೆ ಇಲ್ಲ. ಎಲ್ಲರೊಂದಿಗೆ ಸಹಾಯ ಕೇಳುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.

ದೈಹಿಕ ಸಾಮರ್ಥ್ಯ ಇರುವವರು ಗ್ರಾಮ ತೊರೆದು ಹೊರಟರೆ, ಬೇರೆ ಆಯ್ಕೆ ಇಲ್ಲದವರು ಅವಶೇಷಗಳನ್ನು ಬಳಸಿ ತಾತ್ಕಾಲಿಕ ಆಶ್ರಯ ನಿರ್ಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.