ADVERTISEMENT

ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ನಿಯಂತ್ರಣಕ್ಕೆ ಟ್ರಂಪ್‌ ಕ್ರಮ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 19:46 IST
Last Updated 21 ಆಗಸ್ಟ್ 2019, 19:46 IST
   

ವಾಷಿಂಗ್ಟನ್‌ : ಅಫ್ಗಾನಿಸ್ತಾನದಿಂದ ಪೂರ್ಣ ಪ್ರಮಾಣದಲ್ಲಿ ಸೇನಾ ಪಡೆಗಳನ್ನು ವಾಪಸು ಕರೆಸಿಕೊಳ್ಳುವುದಿಲ್ಲ ಎಂಬ ಸೂಚನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ್ದಾರೆ.

ತಾಲಿಬಾನ್‌ ಮತ್ತೆ ಹೆಡೆ ಎತ್ತದಂತೆ ನಿಯಂತ್ರಿಸಲು ಯಾರನ್ನಾದರೂ ಅಫ್ಗಾನಿಸ್ತಾನದಲ್ಲಿ ಉಳಿಸಿಕೊಳ್ಳಲು ಟ್ರಂಪ್‌ ನಿರ್ಧರಿಸಿದ್ದಾರೆ. ಮಂಗಳವಾರ ಓವಲ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ನಮ್ಮ ಗುಪ್ತಚರ ವಿಭಾಗ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಅಫ್ಗಾನಿಸ್ತಾನದಲ್ಲಿ ನಮ್ಮವರು ಇರಲಿದ್ದಾರೆ’ ಎಂದಿದ್ದಾರೆ.

ಅಫ್ಗಾನಿಸ್ತಾನದಲ್ಲಿತಾಲಿಬಾನ್‌ ಜತೆಗಿನ ಶಾಂತಿ ಮಾತುಕತೆ ಕುರಿತಂತೆ ಮಾತನಾಡಿದ ಟ್ರಂಪ್‌, ‘ಒಪ್ಪಂದದ ಬಳಿಕ ಕೈಗೊಳ್ಳಬೇಕಾದ ಪರ್ಯಾಯ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಅಫ್ಗಾನಿಸ್ತಾನದಲ್ಲಿರುವ ಸೇನಾ ಪಡೆಗಳನ್ನು ವಾಪಸು ಕರೆಸಿಕೊಳ್ಳಲಾಗುತ್ತಿದೆ.ಆದರೆ ಅಲ್ಲಿ ನಮ್ಮ ಇರುವಿಕೆ ಅಗತ್ಯವಾಗಿದೆ’ ಎಂದರು.

ADVERTISEMENT

ಈ ಮೂಲಕಪೂರ್ಣ ಪ್ರಮಾಣದಲ್ಲಿ ಸೇನೆಯನ್ನು ಹಿಂದೆ ಕರೆಸಿಕೊಳ್ಳುವ ಯೋಜನೆ ಇಲ್ಲ ಎನ್ನುವುದು ಸ್ಪಷ್ಟವಾಗಿದೆ.

ಇದು ಅಣು ಯುದ್ಧವಲ್ಲ

‘ಪ್ರಸ್ತುತ ಅಫ್ಗಾನಿಸ್ತಾನ ಸರ್ಕಾರ ಹಾಗೂ ತಾಲಿಬಾನ್‌ ಜತೆ ಅಮೆರಿಕ ಸಂಧಾನ ಸಭೆನಡೆಸುತ್ತಿದೆ. ಸಂಧಾನದಿಂದ ಯಾವ ರೀತಿ ಅಂತಿಮ ಪ್ರತಿಕ್ರಿಯೆ ಬರುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ. 18 ವರ್ಷದಿಂದ ಅಮೆರಿಕ ಸೇನಾ ಪಡೆಗಳು ಅಫ್ಗಾನಿಸ್ತಾನದಲ್ಲಿವೆ. ಇವುಗಳು ಸ್ಥಳೀಯ ಪೊಲೀಸ್‌ ಪಡೆಯಂತಾಗಿದೆ. ಇದು ಅಣು ಯುದ್ಧವಲ್ಲ. ಅಗತ್ಯವಿದ್ದರೆ ನಾವು ಈ ಯುದ್ಧವನ್ನು ವಾರದೊಳಗೆ ಗೆಲ್ಲಬಹುದು. ಆದರೆ ನಾನು ಒಂದು ಕೋಟಿ ಅಫ್ಗಾನ್‌ ನಾಗರಿಕರನ್ನು ಹತ್ಯೆ ಮಾಡಲು ಯೋಚಿಸುತ್ತಿಲ್ಲ.’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.