ADVERTISEMENT

ಬಾಂಗ್ಲಾ ಭೂಕಂಪ: ಸಾವಿನ ಸಂಖ್ಯೆ 10ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 13:20 IST
Last Updated 22 ನವೆಂಬರ್ 2025, 13:20 IST
<div class="paragraphs"><p> ಪ್ರಬಲ ಭೂಕಂಪ</p></div>

ಪ್ರಬಲ ಭೂಕಂಪ

   

ಢಾಕಾ: ಬಾಂಗ್ಲಾದೇಶದಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಶನಿವಾರ ಕೂಡಾ ಢಾಕಾದಲ್ಲಿ ಸಣ್ಣ ಪ್ರಮಾಣದ ಕಂಪನ ಉಂಟಾಗಿದೆ.

ಢಾಕಾ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಥಳೀಯ ಕಾಲಮಾನ ಶುಕ್ರವಾರ ಬೆಳಿಗ್ಗೆ 10.38ಕ್ಕೆ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 5.7 ತೀವ್ರತೆ ದಾಖಲಾಗಿದೆ. ಹಲವು ಮನೆಗಳು ಮತ್ತು ಕಟ್ಟಡಗಳಿಗೆ ಹಾನಿಯಾಗಿವೆ.

ADVERTISEMENT

‘ಢಾಕಾದಲ್ಲಿ ನಾಲ್ವರು, ಭೂಕಂಪದ ಕೇಂದ್ರಬಿಂದುವಾಗಿದ್ದ ನರಸಿಂಗಡಿಯಲ್ಲಿ ಐವರು ಮತ್ತು ನಾರಾಯಣಗಂಜ್‌ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನರಸಿಂಗಡಿಯ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಇಲಾಖೆಯ ಕಚೇರಿ ತಿಳಿಸಿದೆ. 

ಢಾಕಾದ ಹೊರವಲಯದ ಗಾಜಿಪುರದ ಕೈಗಾರಿಕಾ ಪ್ರದೇಶವೊಂದರಲ್ಲೇ 100ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿದ್ದಾರೆ. ಭೂಕಂಪದ ಸಮಯದಲ್ಲಿ ಕಟ್ಟಡಗಳಿಂದ ಹೊರಬರಲು ಪ್ರಯತ್ನಿಸಿದಾಗ ಗಾಯಗೊಂಡರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಢಾಕಾದ ಉತ್ತರ ಭಾಗದ ಅಶುಲಿಯಾದಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಕಂಪನದ ತೀವ್ರತೆ 3.3ರಷ್ಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.