ADVERTISEMENT

ಕೋವಿಡ್‌: ಮತ್ತೆ 114 ಬಲಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 4:08 IST
Last Updated 22 ಫೆಬ್ರುವರಿ 2020, 4:08 IST
ಚೀನಾದ ನಂಜಿಂಗ್‌ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ನಡೆಸುತ್ತಿರುವ ಸಿಬ್ಬಂದಿ  ಎಎಫ್‌ಪಿ ಚಿತ್ರ
ಚೀನಾದ ನಂಜಿಂಗ್‌ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ನಡೆಸುತ್ತಿರುವ ಸಿಬ್ಬಂದಿ  ಎಎಫ್‌ಪಿ ಚಿತ್ರ   

ಬೀಜಿಂಗ್‌,ಯಕೊಹಾಮ (ಪಿಟಿಐ, ಎಎಫ್‌ಪಿ, ರಾಯಿಟರ್ಸ್‌): ’ಕೋವಿಡ್‌–19‘ ವೈರಸ್‌ ಸೋಂಕಿಗೆ ಮತ್ತೆ 114 ಮಂದಿ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 2,118ಕ್ಕೇರಿದೆ. 74,576 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ಗುರುವಾರ ತಿಳಿಸಿದೆ.

ಈ ಸೋಂಕಿನ ಹೊಸ ಪ್ರಕರಣಗಳು ಕಡಿಮೆಯಾಗುತ್ತಿವೆ. ಬುಧವಾರ 45 ಪ್ರಕರಣಗಳು ಮಾತ್ರ ದೃಢಪಟ್ಟಿವೆ. ಹುಬೆ ಪ್ರಾಂತ್ಯದಲ್ಲೂ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿವೆ ಎಂದು ಎನ್‌ಎಚ್‌ಸಿ ತಿಳಿಸಿದೆ.

ಭಾರತದ ಮತ್ತೊಬ್ಬ ವ್ಯಕ್ತಿಗೆ ಸೋಂಕು: ಹಡಗಿನಲ್ಲಿದ್ದ ಭಾರತದ ಮತ್ತೊಬ್ಬ ವ್ಯಕ್ತಿಗೆ ಈ ಸೋಂಕು ತಗುಲಿರು
ವುದು ದೃಢಪಟ್ಟಿದೆ. ಇದರಿಂದ ಸೋಂಕಿಗೀಡಾದ ಭಾರತೀಯರ ಸಂಖ್ಯೆ 8ಕ್ಕೆ ಏರಿದೆ ಎಂದು ಭಾರತದ ರಾಯಭಾರ ಕಚೇರಿ ಹೇಳಿದೆ.ಸೋಂಕಿಗೆ ಒಳಗಾದವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ADVERTISEMENT

ವೈರಸ್‌ ಕಾರಣಕ್ಕಾಗಿ ಜಪಾನ್‌ ಕಡಲತಡಿಯಲ್ಲಿ ಪ್ರವೇಶ ನಿರ್ಬಂಧಕ್ಕೊಳಗಾಗಿದ್ದ ಐಷಾರಾಮಿ ಹಡಗು ‘ಡೈಮೆಂಡ್ ಪ್ರಿನ್ಸೆಸ್’ ಎರಡು ವಾರಗಳ ಬಳಿಕ ಕೊನೆಗೂ ಬುಧವಾರ ದಡಕ್ಕೆ ತಲುಪಿದೆ. ಹಡಗಿನಲ್ಲಿದ್ದ ಇಬ್ಬರು ವೃದ್ಧರು ಸಾವಿಗೀಡಾಗಿದ್ದಾರೆ. 87 ವರ್ಷದ ಪುರುಷ ಮತ್ತು 84 ವರ್ಷದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ ಎಂದು ಜಪಾನ್‌ ಸರ್ಕಾರ ತಿಳಿಸಿದೆ.

ಹಡಗಿನಲ್ಲಿ 621 ಮಂದಿಗೆ ಈ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಮತ್ತೆ 13 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು 634 ಮಂದಿಗೆ ಸೋಂಕು ತಗುಲಿದೆ.

ಹಡಗಿನಲ್ಲಿದ್ದವರಲ್ಲಿ 1000 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳದ ಕಾರಣ ಮನೆಗೆ ತೆರಳಲು ಅನುಮತಿ ನೀಡಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.ಇರಾನ್‌ದಲ್ಲಿ ಕೊರೊನಾ ವೈರಸ್‌ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ. ಹಾಂಗ್‌ಕಾಂಗ್‌ನಲ್ಲಿ ಈ ಸೋಂಕಿಗೆ ಮತ್ತೊಂದು ಬಲಿಯಾಗಿದೆ. ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ಕೊರೊನಾ ವೈರಸ್‌ಗೆ ಗುರುವಾರ ಒಬ್ಬರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.