ADVERTISEMENT

ಅಗ್ನಿಕುಂಡವಾದ ಸುಂದರ ಮಳೆಕಾಡು ಅಮೆಜಾನ್

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 20:32 IST
Last Updated 27 ಆಗಸ್ಟ್ 2019, 20:32 IST
   

ಸುಂದರ ಮಳೆಕಾಡು ಅಮೆಜಾನ್ ಈಗ ಅಕ್ಷರಶಃ ಅಗ್ನಿಕುಂಡ. ಮೂರು ವಾರಗಳಿಂದ ಕಾಡು ಹೊತ್ತಿ ಉರಿದು ಬೂದಿಯಾಗುತ್ತಿದೆ. ಬ್ರೆಜಿಲ್‌ ದೇಶಕ್ಕೆ ಕಾಳ್ಗಿಚ್ಚಿನ ಭಯಾನಕ ಬಿಸಿ ತಟ್ಟಿದೆ. ಕಾಳ್ಗಿಚ್ಚಿಗೆ ಕಾರಣಗೇಳೇನು, ಬ್ರೆಜಿಲ್ ಸುತ್ತಮುತ್ತ ಏನಾಗುತ್ತಿದೆ, ಹವಾಮಾನ ವೈಪರೀತ್ಯದ ಮೇಲೆ ಆಗುವ ಪರಿಣಾಮಗಳೇನು, ವಿಶ್ವ ಸಮುದಾಯ ಹೇಗೆ ಸ್ಪಂದಿಸಿದೆ ಎಂಬ ಸಮಗ್ರ ಮಾಹಿತಿ ಇಲ್ಲಿದೆ..

ಈ ದಶಕದ ಅತಿದೊಡ್ಡ ಅಗ್ನಿಜ್ವಾಲೆಗೆ ದಕ್ಷಿಣ ಅಮೆರಿಕದ ಅಮೆಜಾನ್ ಕಾಡು ಬೆಂದು ಹೋಗಿದೆ. ಬ್ರೆಜಿಲ್ ದೇಶದ ರೊರೈಮಾ, ಅಕ್ರೆ, ರೊಂಡೊನಿಯಾ ಮತ್ತು ಅಮೆಜಾನೊಸ್‌ ರಾಜ್ಯಗಳು ಭಾಗಶಃ ನಲುಗಿವೆ. ಬೆಂಕಿ ನಂದಿಸುವ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆಯಾದರೂ ನಿಯಂತ್ರಣಕ್ಕೆ ಬರುತ್ತಿಲ್ಲ.

ಜ್ವಾಲೆ ಎಲ್ಲೆಲ್ಲಿ...

ADVERTISEMENT

ಬ್ರೆಜಿಲ್ ಬಿಟ್ಟರೆ, ಪಕ್ಕದ ವೆನಿಜುವೆಲಾ ಹಾಗೂ ಬೊಲಿವಿಯಾ ದೇಶಗಳಿಗೆ ಅತಿಹೆಚ್ಚು ತೊಂದರೆಯಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಟ್ಯಾಂಕರ್ ವಿಮಾನಗಳನ್ನು ಬಳಸಲಾಗುತ್ತಿದೆ.ಬೊಲಿವಿಯಾ ಅಧ್ಯಕ್ಷ ಇವೊ ಮೊರಾಲ್ಸ್ ಅವರು ಬೋಯಿಂಗ್ 747 ಸೂಪರ್‌ಟ್ಯಾಂಕರ್ ವಿಮಾನವನ್ನು ಗುತ್ತಿಗೆಗೆ ಪಡೆದಿದ್ದಾರೆ. 1.15 ಲಕ್ಷ ಲೀಟರ್ ನೀರು ಹೊತ್ತೊಯ್ಯುವ ಸಾಮರ್ಥ್ಯದ ಇದು ಶುಕ್ರವಾರದಿಂದ ಕಾರ್ಯಾಚರಣೆಗೆ ಇಳಿಯಲಿದೆ.ಬೆಂಕಿಯಿಂದ ಪಾರಾಗಿ ಬರುವ ಕಾಡುಪ್ರಾಣಿಗಳ ರಕ್ಷಣೆಗೆ ಅಲ್ಲಲ್ಲಿ ಪ್ರಾಣಿಧಾಮಗಳನ್ನು ಸ್ಥಾಪಿಸಲಾಗಿದೆ.

ಬೇಸಿಗೆಯ ಕಿಚ್ಚು

ಜುಲೈನಿಂದ ಅಕ್ಟೋಬರ್‌ವರೆಗಿನ ಬೇಸಿಗೆ ಸಮಯದಲ್ಲಿ ಅಮೆಜಾನ್‌ನಲ್ಲಿ ಕಾಳ್ಗಿಚ್ಚು ಸಾಮಾನ್ಯ. ಸಿಡಿಲಿನ ಹೊಡೆತದಿಂದ ಬೆಂಕಿ ಹತ್ತುವ ನೈಸರ್ಗಿಕ ಪ್ರಕ್ರಿಯೆಗಳ ಜೊತೆಗೆ ಮಾನವನ ಚಟುವಟಿಕೆಗಳಿಂದಲೂ ಕಾಳ್ಗಿಚ್ಚು ಸಂಭವಿಸುತ್ತದೆ.ಜುಲೈ ಹಾಗೂ ಆಗಸ್ಟ್ ತಿಂಗಳು ಬಿಟ್ಟರೆ, ಅಮೆಜಾನ್ ಕಾಡಿನಲ್ಲಿ ತೇವಾಂಶ ಮತ್ತು ಆರ್ದ್ರ ವಾತಾವರಣ ಇದ್ದೇ ಇರುತ್ತದೆ. ನವೆಂಬರ್‌ ಹೊತ್ತಿಗೆ ಕಾಳ್ಗಿಚ್ಚು ತಣ್ಣಗಾಗುತ್ತದೆ.

ಅರಣ್ಯ ಪ್ರದೇಶವನ್ನು ಕೃಷಿ ಚಟುವಟಿಕೆಗೆ ಪರಿವರ್ತನೆ ಮಾಡುವಲ್ಲಿ ಮಾನವ ನಿರ್ಮಿತ ಕಾಳ್ಗಿಚ್ಚಿನ ಪಾತ್ರ ದೊಡ್ಡದು ಎನ್ನುತ್ತಾರೆ ಅಮೆಜಾನ್‌ ನಿಗಾ ಸಮಿತಿಯ ಕ್ರಿಸ್ಟಿಯನ್ ಪಯೊರಿಯರ್.

ಬ್ರೆಜಿಲ್ ಸರ್ಕಾರದ ವಾದವೇನು?

ಮರಗಳನ್ನು ಕಡಿಯುವ ಪರಿಸರ ವಿರೋಧಿ ಚಟುವಟಿಕೆಗಳಿಗೆ ಬ್ರೆಜಿಲ್ ಅಧ್ಯಕ್ಷ ಜೇರ್ ಬೊಲ್ಸೊನಾರೊ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬುದು ಪರಿಸರ ಕಾರ್ಯಕರ್ತರ ಆರೋಪ. ಆದರೆ ಸರ್ಕಾರದ ವರ್ಚಸ್ಸು ಕುಂದಿಸಲು ಸರ್ಕಾರೇತರ ಸಂಘಟನೆಗಳು ಕಾಡಿಗೆ ಬೆಂಕಿ ಹಚ್ಚುತ್ತಿವೆ ಎಂಬುದು ಅಧ್ಯಕ್ಷರ ಪ್ರತ್ಯುತ್ತರ. ಬೃಹತ್ ಪ್ರಮಾಣದ ಅಗ್ನಿಶಾಮಕ ವ್ಯವಸ್ಥೆ ಸ್ಥಾಪಿಸಲು ಸಂಪನ್ಮೂಲದ ಕೊರತೆಯಿದೆ ಎಂಬ ಸಬೂಬನ್ನೂ ಅವರು ಮುಂದಿಡುತ್ತಿದ್ದಾರೆ. ಈ ತಿಕ್ಕಾಟಕ್ಕೆ ಅಮೆಜಾನ್‌ ಪ್ರತಿವರ್ಷ ಬಲಿಯಾಗುತ್ತಿದೆ.

ಮೋಡದ ಒಳಗೆ..

ಕಾಳ್ಗಿಚ್ಚಿನಿಂದ ಅಪಾರ ಪ್ರಮಾಣದ ಇಂಗಾಲದ ಡೈಆಕ್ಸೈಡ್,ನೈಟ್ರೋಜನ್ ಆಕ್ಸೈಡ್, ಕಾರ್ಬನ್ ಮೊನಾಕ್ಸೈಡ್ ಮೊದಲಾದ ಅನಿಲಗಳು ವಾತಾವರಣ ಸೇರುತ್ತಿದ್ದು, ಅರಣ್ಯ ವ್ಯಾಪ್ತಿಯಾಚೆಗೆ ಹೊಗೆ ಮೋಡಗಳು ಆವರಿಸಿವೆ. 228 ಮೆಗಾಟನ್‌ನಷ್ಟು ಇಂಗಾಲ ಬಿಡುಗಡೆಯಾಗಿದೆ ಎಂದು ಅಂದಾಜಿಸಲಾಗಿದೆ. ಹೊಗೆಯ ಮೋಡಗಳು ದಕ್ಷಿಣ ಅಮೆರಿಕದ ಕರಾವಳಿಯನ್ನು ದಾಟಿಹೋಗಿವೆ.3,200 ಕಿಲೋಮೀಟರ್ ದೂರದ ಸಾವೊ ಪೌಲೊ ನಗರದ ಆಗಸ ಕಪ್ಪಾಗಿದೆ.

ಅಮೆಜಾನ್ ಏಕೆ ವಿಶಿಷ್ಟ?

ದಕ್ಷಿಣ ಅಮೆರಿಕ ಖಂಡದಲ್ಲಿ ವ್ಯಾಪಿಸಿರುವಅಮೆಜಾನ್, ಭೂಗ್ರಹದ ಬೃಹತ್ ಉಷ್ಣ ವಲಯದ ಮಳೆ ಕಾಡು ಎನಿಸಿದೆ. 21 ಲಕ್ಷ ಚದರ ಮೈಲಿಯಷ್ಟು ವಿಸ್ತಾರದಲ್ಲಿ ಜಗತ್ತಿನ ಅರ್ಧದಷ್ಟು ಮಳೆಕಾಡು ಹರಡಿಕೊಂಡಿದೆ. ವಿಶ್ವದ ಅರ್ಧಕ್ಕಿಂತಲೂ ಹೆಚ್ಚು ಸಸ್ಯ ಹಾಗೂ ಪ್ರಾಣಿ ಪ್ರಭೇದಗಳಿಗೆ ಇದು ಆವಾಸಸ್ಥಾನವಾಗಿದೆ.

* 30 ಲಕ್ಷಕ್ಕೂ ಹೆಚ್ಚು ಪ್ರಬೇಧದ ಸಸ್ಯ ಹಾಗೂ ಪ್ರಾಣಿವರ್ಗ ಇಲ್ಲಿದೆ

* 10 ಲಕ್ಷ ಮಂದಿ ಬುಡಕಟ್ಟು ಜನರಿಗೆ ಕಾಡು ಆಶ್ರಯ ಒದಗಿಸಿದೆ

* ಜಾಗತಿಕ ಹವಾಮಾನ ವೈಪರೀತ್ಯ ತಡೆಯಲ್ಲಿ ಮಹತ್ವದ ಪಾತ್ರ

* ಪ್ರತಿವರ್ಷ ಲಕ್ಷಗಟ್ಟಲೆ ಟನ್‌ನಷ್ಟು ಇಂಗಾಲವನ್ನು ಹೀರಿಕೊಳ್ಳುತ್ತದೆ

* ಅರಣ್ಯ ನಾಶವಾದರೆ, ಇಂಗಾಲ ಹೀರಿಕೊಳ್ಳುವ ಸಾಮರ್ಥ್ಯ ಕುಂಠಿತ

* ವಿಶ್ವದ 2ನೇ ಅತಿದೊಡ್ಡ ನದಿ ಅಮೆಜಾನ್ ಸೇರಿದಂತೆ ನೂರಾರು ನದಿಗಳು ಈ ಕಾಡಿನ ಮೂಲಕ ಹರಿಯುತ್ತವೆ

ಕಾಡು ಹೋಗಿ ಕೃಷಿ ಬಂತು

ಈಗ್ಗೆ 40 ವರ್ಷಗಳ ಹಿಂದೆ ಅರಣ್ಯನಾಶ ಶುರುವಾಯಿತು. 90ರ ದಶಕದಲ್ಲಿ ಇದು ಉತ್ತುಂಗ ತಲುಪಿತು. ಸ್ಪೇನ್‌ ದೇಶದಷ್ಟು ವ್ಯಾಪ್ತಿಯ ಅರಣ್ಯವನ್ನು ತೆರವುಗೊಳಿಸಿ, ಪಶು ಸಂಗೋಪನೆಹಾಗೂ ಸೊಯಾಬೀನ್ ಉತ್ಪಾದನೆ ಚಟುವಟಿಕೆ ಆರಂಭಿಸಲಾಯಿತು. ಕೃಷಿ ಉತ್ಪಾದನೆ ಹೆಚ್ಚಿಸಲು ಮತ್ತಷ್ಟು ಅರಣ್ಯ ಭಾಗ ಪರಿವರ್ತನೆಯಾಯಿತು. ಅರಣ್ಯ ನಾಶದ ಪ್ರಮಾಣ ಈಗ ತಗ್ಗಿದ್ದರೂ, ಮಳೆಕಾಡಿನ ಜೀವವೈವಿಧ್ಯತೆಗೆ ಎದುರಾಗಿರುವ ಅಪಾಯ ಹಾಗೆಯೇ ಇದೆ.

ಅಮೆಜಾನ್ ಸುಟ್ಟರೆ ಏನಾಗುತ್ತದೆ?

ಕಾಳ್ಗಿಚ್ಚು ಹಾಗೂ ಹವಾಮಾನ ವೈಪರೀತ್ಯ ವಿಷವರ್ತುಗಳಿದ್ದ ಹಾಗೆ. ಜಗತ್ತಿನ ಶ್ವಾಸಕೋಶ ಎನಿಸಿರುವ ಅಮೆಜಾನ್‌ ಕಾಳ್ಗಿಚ್ಚಿಗೆ ತುತ್ತಾದರೆ ವಾತಾವರಣಕ್ಕೆ ಹಸಿರುಮನೆ ಅನಿಲಗಳು ಬಿಡುಗಡೆಯಾಗುತ್ತವೆ. ಈ ಪ್ರಕ್ರಿಯೆಯು ಭೂಗ್ರಹವನ್ನು ಬಿಸಿಯಾಗಿಸುತ್ತದೆ. ತಾಪಮಾನ ಏರಿದರೆಭೀಕರ ಬರಗಾಲದಂತಹ ಘಟನೆಗಳು ಪದೇ ಪದೇ ಜರುಗುತ್ತವೆ. ಮಳೆಯ ವಿನ್ಯಾಸ ಏರುಪೇರಾಗುತ್ತದೆ. ಕುಡಿಯುವ ನೀರು, ಜೀವ ವೈವಿಧ್ಯ, ಕೃಷಿ ಹಾಗೂ ಮಾನವನ ಆರೋಗ್ಯದ ಮೇಲೂ ನೇರ ಪರಿಣಾಮ ಉಂಟಾಗುತ್ತದೆ. ಎಂದು ಗ್ರೀನ್‌ಪೀಸ್ ಸಂಘಟನೆ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

***

* ಜಗತ್ತಿನ ಶೇ 20 ರಷ್ಟು ಆಮ್ಲಜನಕ ಇಲ್ಲಿ ಉತ್ಪಾದನೆಯಾಗುತ್ತದೆ

* ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿಕಾಳ್ಗಿಚ್ಚಿನ ಪ್ರಮಾಣ ಶೇ 85ರಷ್ಟುಏರಿಕೆಯಾಗಿದೆ

*2018ಕ್ಕೆ ಹೋಲಿಸಿದರೆ ಅರಣ್ಯನಾಶ ಪ್ರಮಾಣಶೇ 278ರಷ್ಟು ಹೆಚ್ಚಳವಾಗಿದೆ

* ಫುಟ್ಬಾಲ್‌ ಮೈದಾನದಷ್ಟು ಅರಣ್ಯಪ್ರದೇಶ ಪ್ರತಿ ನಿಮಿಷಕ್ಕೆ ಸುಟ್ಟು ಬೂದಿಯಾಗುತ್ತಿದೆ

* ಬ್ರೆಜಿಲ್‌ನ ಅತಿದೊಡ್ಡ ರಾಜ್ಯ ಅಮೆಜೋನಾಸ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

* ಅಂದಾಜು 2,500 ಸಕ್ರಿಯ ಅಗ್ನಿಜ್ವಾಲೆಗಳು ಈಗಲೂ ಕಾಡನ್ನು ಸುಡುತ್ತಿವೆ

* ಒಂದು ವಾರದಿಂದಲೂ ಕಾಳ್ಗಿಚ್ಚಿನ ಮೇಲೆ ನಿಗಾ ವಹಿಸಿರುವನಾಸಾ

* ಗುರುವಾರ ಗುಡುಗು ಸಹಿತ ಮಳೆಯ ಮುನ್ಸೂಚನೆ; ಬೆಂಕಿ ತಹಬದಿಗೆ ತರುವ ವಿಶ್ವಾಸ

* ಜಿ–7 ಶೃಂಗಸಭೆಯಲ್ಲಿ ಕಾಳ್ಗಿಚ್ಚಿನ ಚರ್ಚೆ; ₹140 ಕೋಟಿ ಅನುದಾನ ಘೋಷಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.