ನವದೆಹಲಿ: ತಲೆಮರೆಸಿಕೊಂಡಿರುವ ಖಾಲಿಸ್ಥಾನ ಪ್ರತ್ಯೇಕತಾವಾದಿ ಹೋರಾಟಗಾರ ಅಮೃತ್‌ಪಾಲ್ ಸಿಂಗ್ ಅಜ್ಞಾತ ಸ್ಥಳದಿಂದ ವಿಡಿಯೊ ಕಳುಹಿಸಿದ್ದಾರೆ., ಸಿಖ್ ಸಮುದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ಬೈಸಾಖಿಯಲ್ಲಿ 'ಸರಬತ್ ಖಾಲಸಾ' ಸಭೆಗೆ ಕರೆ ನೀಡಿದ್ದು, ಇದಕ್ಕಾಗಿ ಅತ್ಯಂತ ಉತ್ಸಾಹದಲ್ಲಿದ್ದೇನೆ ಎಂದು ಅವರು ಹೇಳಿದ್ದಾರೆ.
ಪಂಜಾಬ್ ಸರ್ಕಾರವು ನನ್ನನ್ನು ಮಾತ್ರ ಬಂಧಿಸಲು ಬಯಸಿದ್ದರೆ, ಪೊಲೀಸರು ನನ್ನ ಮನೆಗೆ ಬರುತ್ತಿದ್ದರು. ಆಗ ನಾನು ಶರಣಾಗಿಬಿಡುತ್ತಿದ್ದೆ. ಆದರೆ, ನನ್ನ ವಿರುದ್ಧದ ಪೊಲೀಸ್ ಕ್ರಮವು ಸಿಖ್ ಸಮುದಾಯದ ಮೇಲಿನ ದಾಳಿ ಎಂದು ಅವರು ಪ್ರತಿಪಾದಿಸಿದ್ದಾರೆ.
‘ನನ್ನ ಬಂಧನವು ದೇವರ ಕೈಯಲ್ಲಿದೆ’ಎಂದು ಅವರು ದಿನಾಂಕವಿಲ್ಲದ ವಿಡಿಯೊದಲ್ಲಿ ಪಂಜಾಬಿ ಭಾಷೆಯಲ್ಲಿ ಹೇಳಿದ್ದಾರೆ.
‘ಮೇನ್ ಚಾರ್ಧಿ ಕಲಾ ಚಾನ್, ಕೋಯಿ ವೆ ಮೇರಾ ವಾಲ್ ವಿಂಗ ನಹಿ ಕರ್ ಸಕ್ಯಾ (ನಾನು ಅತ್ಯಂತ ಉತ್ಸುಕನಾಗಿದ್ದೇನೆ. ಯಾರೂ ನನಗೆ ಹಾನಿ ಮಾಡಲಾರರು)’ಎಂದೂ ಅವರು ಹೇಳಿದ್ದಾರೆ. ನನಗೆ ಬಂಧನದ ಬಗ್ಗೆ ಈ ಮೊದಲೂ ಭಯ ಇರಲಿಲ್ಲ. ಈಗಲೂ ಇಲ್ಲ ಎಂದಿದ್ದಾರೆ.
ಪಂಜಾಬ್ ಪೊಲೀಸರು ಅಮೃತ್‌ಪಾಲ್ ಸಿಂಗ್ ಬಂಧಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ನಡುವೆ, ಅಮೃತಸರ ಮತ್ತು ಬಟಿಂಡಾದ ತಲ್ವಾಂಡಿ ಸಬೋ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಅಮೃತ್‌ಪಾಲ್ ಶರಣಾಗಬಹುದು ಎಂದು ಕೆಲವು ವರದಿಗಳು ಹೇಳಿವೆ.
ಮಾರ್ಚ್ 18ರಂದು ಪೊಲೀಸ್ ಕಾರ್ಯಾಚರಣೆ ಆರಂಭವಾದಾಗಿನಿಂದ, 30 ವರ್ಷದ ಅಮೃತ್‌ಪಾಲ್ ಸಿಂಗ್ ತಲೆಮರೆಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.