ADVERTISEMENT

ಸೀಟು ಹಂಚಿಕೆ ಕಗ್ಗಂಟು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 19:30 IST
Last Updated 31 ಆಗಸ್ಟ್ 2019, 19:30 IST
ಆದಿತ್ಯ ಠಾಕ್ರೆ
ಆದಿತ್ಯ ಠಾಕ್ರೆ   

ಮುಂಬೈ: ಗಣೇಶೋತ್ಸವ ಮುಗಿಯುತ್ತಿದ್ದಂತೆಯೇ ಚುನಾವಣಾ ಆಯೋಗವು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಿಸುವ ಸಾಧ್ಯತೆ ಇದೆ. ಆದರೆ, ಸೀಟು ಹಂಚಿಕೆ ವಿಚಾರವಾಗಿ ಪ್ರಮುಖ ಪಕ್ಷಗಳು ಇನ್ನೂ ಅಂತಿಮ ತೀರ್ಮಾನ ಪ್ರಕಟಿಸಿಲ್ಲ.

ರಾಜ್ಯದಲ್ಲಿ ಬಿಜೆಪಿ- ಶಿವಸೇನಾ ಹಾಗೂ ಕಾಂಗ್ರೆಸ್‌– ಎನ್‌ಸಿಪಿ ಮೈತ್ರಿಗಳು ಪ್ರಮುಖ ಸ್ಪರ್ಧಿಗಳಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವುದಕ್ಕೂ ಮುನ್ನ ಸೀಟು ಹಂಚಿಕೆ ವಿಚಾರದಲ್ಲಿ ಅಂತಿಮ ತೀರ್ಮಾನಕ್ಕೆ ಬರುವ ಪ್ರಯತ್ನವನ್ನು ಮಾಡುತ್ತಿವೆ.

ಬಿಜೆಪಿ– ಶಿವಸೇನಾ ಮಧ್ಯೆ ಈ ಬಗ್ಗೆ ಒಂದು ಹಂತದ ಮಾತುಕತೆ ನಡೆದಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಮತ್ತು ಶಿವಸೇನಾದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಬಿಟ್ಟರೆ ಈ ಮಾತುಕತೆ ವಿವರ ಯಾರಿಗೂ ತಿಳಿದಿಲ್ಲ.

ADVERTISEMENT

2014ರ ಚುನಾವಣೆಯಲ್ಲಿ ತಾವು ಗೆದ್ದಿರುವ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಎರಡೂ ಪಕ್ಷಗಳು ಮುಂದಾಗಬಹುದು (ಬಿಜೆಪಿಯು 122 ಕ್ಷೇತ್ರಗಳಲ್ಲಿ ಹಾಗೂ ಶಿವಸೇನಾ 63 ಕ್ಷೇತ್ರಗಳಲ್ಲಿ ಗೆದ್ದಿದೆ). ಆದರೆ ಕೆಲವು ಕ್ಷೇತ್ರಗಳನ್ನು ಅದಲುಬದಲು ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ವರ್ಲಿ ಕ್ಷೇತ್ರದಿಂದ ಆದಿತ್ಯ?

ಶಿವಸೇನಾದ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎನ್ನಲಾಗುತ್ತಿದೆ. ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಯೂ ಬಿಂಬಿಸಲಾಗುತ್ತಿದೆ.

ಮುಂಬೈಯ ವರ್ಲಿ ಕ್ಷೇತ್ರದಿಂದ ಅವರು ಕಣಕ್ಕಿಳಿಯುವ ಸಾಧ್ಯತೆ ಇದ್ದು, ಪಕ್ಷವು ಈಗಾಗಲೇ ಸಿದ್ಧತೆ ಆರಂಭಿಸಿದೆ. ಆದರೆ ಈ ಬಗ್ಗೆ ಅಂತಿಮ ತೀರ್ಮಾನವನ್ನು ಉದ್ಧವ್‌ ಅವರೇ ಕೈಗೊಳ್ಳಲಿದ್ದಾರೆ ಎಂದು ಶಿವಸೇನಾ ಮುಖಂಡರು ಹೇಳಿದ್ದಾರೆ.

ಠಾಕ್ರೆ ಕುಟುಂಬದ ಸಮೀಪವರ್ತಿ ಅನಿಲ್‌ ಪರಬ್‌ ಅವರು ಈಚೆಗೆ ವರ್ಲಿ ಕ್ಷೇತ್ರದ ಶಿವಸೇನಾ ಮುಖಂಡರ ಸಭೆಯನ್ನು ನಡೆಸಿದ್ದರು. ‘ಒಂದುವೇಳೆ ಆದಿತ್ಯಠಾಕ್ರೆ ಈ ಕ್ಷೇತ್ರದಿಂದ ಸ್ಪರ್ಧಿಸಿದರೆ ಉಳಿದ ಪಕ್ಷಗಳ ಅಭ್ಯರ್ಥಿಗಳ ಠೇವಣಿಯೂ ನಷ್ಟವಾಗುವಂತೆ ನಾವು ನೋಡಿಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ತಯಾರಿ ಆರಂಭಿಸಿದ್ದೇವೆ’ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.