ADVERTISEMENT

ದ. ಆಫ್ರಿಕಾ | ಚಿನ್ನದ ಗಣಿಯಲ್ಲಿ ಅಕ್ರಮ ಗಣಿಗಾರಿಕೆ: 100ಕ್ಕೂ ಅಧಿಕ ಮಂದಿ ಸಾವು

ಏಜೆನ್ಸೀಸ್
Published 14 ಜನವರಿ 2025, 13:49 IST
Last Updated 14 ಜನವರಿ 2025, 13:49 IST
   

ಜೋಹಾನ್ಸ್‌ಬರ್ಗ್‌(ದಕ್ಷಿಣ ಆಫ್ರಿಕಾ’: ಪಾಳುಬಿದ್ದಿದ್ದ ಆಳವಾದ ಚಿನ್ನದ ಗಣಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಲು ಹೋಗಿ ತಿಂಗಳಿನಿಂದ ಸಿಲುಕಿದ್ದ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 

‘ಇಲ್ಲಿನ ಬಫೆಲ್ಸ್‌ಫೊಂಟೈನ್‌ ಚಿನ್ನದ ಗಣಿಗೆ ಇಳಿದಿದ್ದ ಕನಿಷ್ಠ 100 ಅಧಿಕ ಮಂದಿ ಮೃತಪಟ್ಟಿದ್ದಾರೆ. ಶುಕ್ರವಾರದವರೆಗೆ 18 ಮಂದಿಯ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದ್ದು, 26 ಮಂದಿಯನ್ನು ಜೀವಂತವಾಗಿ ಹೊರತರಲಾಗಿದೆ. 500ಕ್ಕೂ ಅಧಿಕ ಮಂದಿ ಗಣಿಯ ಒಳಭಾಗದಲ್ಲಿ ಸಿಲುಕಿರುವ ಸಾಧ್ಯತೆಯಿದೆ. ಹಸಿವು ಹಾಗೂ ನಿರ್ಜಲೀಕರಣದಿಂದಲೇ ಮೃತಪಟ್ಟಿರುವ ಸಾಧ್ಯತೆಯಿದೆ’ ಎಂದು ಗಣಿಬಾಧಿತ ಸಂಘಟನೆಗಳ ವಕ್ತಾರೆ ಸಬೆಲೊ ಮನ್‌ಗುನಿ ತಿಳಿಸಿದರು.

‘ಗಣಿಯ ಒಳಗೆ ಸಿಲುಕಿರುವ ಜನರಿಗೆ ಮೊಬೈಲ್ ಫೋನ್‌ ಕಳುಹಿಸಲಾಗಿತ್ತು. ಅವರು ಚಿತ್ರೀಕರಿಸಿ, ಕಳುಹಿಸಿದ ವಿಡಿಯೊಗಳಲ್ಲಿ 10ಕ್ಕೂ ಅಧಿಕ ಮೃತದೇಹಗಳನ್ನು ಪ್ಲಾಸ್ಟಿಕ್‌ನಿಂದ ಸುತ್ತಿಟ್ಟಿರುವುದು ಕಂಡುಬಂದಿದೆ’ ಎಂದರು.

ADVERTISEMENT

ರಕ್ಷಣೆ ಹೇಗೆ..?

ಗಣಿಯ ಒಳಭಾಗಕ್ಕೆ ಪಂಜರದ ರಚನೆ ಹೊಂದಿದ ಉಪಕರಣವನ್ನು ಕಳುಹಿಸಿ ರಕ್ಷಣೆ ಮಾಡಲಾಗುತ್ತಿದೆ. ಗಣಿಯು 2.5 ಕಿ.ಮೀ. ಆಳದಲ್ಲಿದ್ದು, ದೊಡ್ಡ ಪ್ರಮಾಣದಲ್ಲಿ ರಕ್ಷಣೆ ನಡೆಸಲು ತೊಡಕು ಉಂಟಾಗಿದೆ.

ಯಾಕೆ ಹೀಗೆ..?

ದಕ್ಷಿಣ ಆಫ್ರಿಕಾದಲ್ಲಿ ಸರ್ಕಾರದ ಅನುಮತಿ ಪಡೆದು ಕಾನೂನುಬದ್ಧವಾಗಿ ಗಣಿಗಾರಿಕೆ ನಡೆಸುವ ಕಂಪನಿಗಳು ಲಾಭಾಂಶ ಕಡಿಮೆಯಾಗುತ್ತಿದ್ದಂತೆಯೇ ಅಂತಹ ಜಾಗದಲ್ಲಿ ಚಟುವಟಿಕೆ ಸ್ಥಗಿತಗೊಳಿಸುತ್ತವೆ. ಈ ವೇಳೆ ಅಳಿದುಳಿದ ಚಿನ್ನ ಪಡೆಯಲು ಸ್ಥಳೀಯರು ಇಂತಹ ಗಣಿಗಳಿಗೆ ಅಕ್ರಮವಾಗಿ ಇಳಿದು ಸಂಕಷ್ಟಕ್ಕೆ ಸಿಲುಕುವುದು ಸಾಮಾನ್ಯ ವಿಚಾರ. 

‘ಸಂಕಷ್ಟಕ್ಕೆ ಸಿಲುಕಿದ ವೇಳೆ ಬಂಧನದ ಭೀತಿಯಿಂದ ಪೊಲೀಸರ ನೆರವು ಪಡೆಯಲು ಹಿಂದೇಟು ಹಾಕುತ್ತಾರೆ. ಅಕ್ರಮ ಗಣಿಗಾರಿಕೆಯಾದ ಕಾರಣ, ಸರ್ಕಾರದಿಂದಲೂ ತಕ್ಷಣಕ್ಕೆ ಯಾವುದೇ ನೆರವು ಸಿಗುವುದಿಲ್ಲ. ಸ್ಥಳೀಯರು, ನಾಗರಿಕ ಸಂಘಟನೆಗಳ ಒತ್ತಡದ ಬಳಿಕ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ. ಈ ಪ್ರಕ್ರಿಯೆ ವಿಳಂಬವಾದ ವೇಳೆ ಒಳಭಾಗದಲ್ಲಿ ಸಿಲುಕಿದವರು ಹಸಿವು, ನಿರ್ಜಲೀಕರಣದಿಂದ ಸಾಕಷ್ಟು ಸಂಖ್ಯೆಯಲ್ಲಿ ಮೃತಪಡುತ್ತಾರೆ’ ಎಂದು ಸಬೆಲೊ ಮನ್‌ಗುನಿ ತಿಳಿಸಿದರು.

ಗಣಿಯಲ್ಲಿ ಸಿಲುಕಿರುವವರಿಗೆ ಸರ್ಕಾರದಿಂದ ಯಾವುದೇ ನೆರವು ನೀಡಲು ಸಾಧ್ಯವಿಲ್ಲ. ಅವರನ್ನೂ ‘ಅಪರಾಧಿಗಳು’ ಎಂದು ಪರಿಗಣಿಸಲಾಗಿದೆ.
ಖುಮ್‌ಡಜೊ ನಟ್ಸಾವ್ಹೆನಿ, ಸಂಪುಟ ಸಚಿವ, ದಕ್ಷಿಣ ಆಫ್ರಿಕಾ
ಗಣಿಯ ಒಳಭಾಗದಲ್ಲಿ ಮೃತದೇಹಗಳನ್ನು ಪ್ಲಾಸ್ಟಿಕ್‌ನಿಂದ ಸುತ್ತಿಟ್ಟಿರುವ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.