ADVERTISEMENT

ಅಮೆರಿಕ: ಪೊಲೀಸರ ಗುಂಡಿಗೆ ಮತ್ತೊಬ್ಬ ಕಪ್ಪು ವರ್ಣೀಯ ಸಾವು, ಭುಗಿಲೆದ್ದ ಪ್ರತಿಭಟನೆ

ಅಟ್ಲಾಂಟಾದ ಪೊಲೀಸ್‌ ಮುಖ್ಯಸ್ಥ ರಾಜೀನಾಮೆ

ಪಿಟಿಐ
Published 14 ಜೂನ್ 2020, 6:33 IST
Last Updated 14 ಜೂನ್ 2020, 6:33 IST
ಕಪ್ಪು ವರ್ಣೀಯ ಯುವಕನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿರುವುದನ್ನು ಖಂಡಿಸಿ ಅಮೆರಿಕದ ಅಟ್ಲಾಂಟಾದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಜನರನ್ನು ಪೊಲೀಸರು ಚದುರಿಸಿದರು –ಪಿಟಿಐ ಚಿತ್ರ
ಕಪ್ಪು ವರ್ಣೀಯ ಯುವಕನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿರುವುದನ್ನು ಖಂಡಿಸಿ ಅಮೆರಿಕದ ಅಟ್ಲಾಂಟಾದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಜನರನ್ನು ಪೊಲೀಸರು ಚದುರಿಸಿದರು –ಪಿಟಿಐ ಚಿತ್ರ   

ಅಟ್ಲಾಂಟಾ: ಆಫ್ರೋ–ಅಮೆರಿಕನ್‌ ಪ್ರಜೆ ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಇನ್ನೂ ಜನರ ಮನದಲ್ಲಿದ್ದು, ಅಮೆರಿಕಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಮಧ್ಯೆಯೇ, ಮತ್ತೊಬ್ಬ ಕಪ್ಪು ವರ್ಣೀಯನನ್ನು ಅಟ್ಲಾಂಟಾದಲ್ಲಿ ಪೊಲೀಸರು ಗುಂಡಿಕ್ಕಿ ಶನಿವಾರ ಹತ್ಯೆ ಮಾಡಿದ್ದಾರೆ.

27 ವರ್ಷದ ರೇಶರ್ಡ್‌ ಬ್ರೂಕ್ಸ್‌ ಹತ್ಯೆಯಾದ ಕಪ್ಪು ವರ್ಣೀಯ. ಈ ಘಟನೆ ನಡೆದ ಕೆಲವೇ ಗಂಟೆಗಳ ನಂತರ, ಅಟ್ಲಾಂಟಾ ಪೊಲೀಸ್‌ ಮುಖ್ಯಸ್ಥ ಎರಿಕಾ ಶೀಲ್ಡ್ಸ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಘಟನೆ ಖಂಡಿಸಿ ಅಟ್ಲಾಂಟಾದಲ್ಲಿ ಭಾರಿ ಪ್ರತಿಭಟನೆ ನಡೆದಿದೆ. ಬ್ರೂಕ್ಸ್‌ ಹತ್ಯೆ ನಡೆದ ವೆಂಡಿ ರೆಸ್ಟೋರೆಂಟ್‌ಗೆ ಪ್ರತಿಭಟನಕಾರರು ಶನಿವಾರ ರಾತ್ರಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಘಟನೆ ವಿವರ: ವೆಂಡಿ ರೆಸ್ಟೋರೆಂಟ್‌ನ ವಾಹನ ಪಾರ್ಕಿಂಗ್‌ ಸ್ಥಳದಲ್ಲಿರುವ ಕಾರೊಂದರಲ್ಲಿ ಯುವಕನೊಬ್ಬ ಮಲಗಿದ್ದು, ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಕೆಲವರು ಪೊಲೀಸರಿಗೆ ದೂರಿದ್ದಾರೆ.

‘ಸ್ಥಳಕ್ಕೆ ತೆರಳಿದ್ದ ಪೊಲೀಸರು, ಕಾರಿನಲ್ಲಿದ್ದ ಯುವಕಬ್ರೂಕ್ಸ್ ಮದ್ಯಪಾನ ಮಾಡಿರುವ ಶಂಕೆ ವ್ಯಕ್ತಪಡಿಸಿ, ಪರೀಕ್ಷೆಗೆ ಒಳಗಾಗುವಂತೆ‌ ಸೂಚನೆ ನೀಡಿದ್ದಾರೆ. ಈ ಪರೀಕ್ಷೆಗೆ ಒಳಪಡಲು ನಿರಾಕರಿಸಿದ ಬ್ರೂಕ್ಸ್‌, ಓಡಿ ಹೋಗಲು ಯತ್ನಿಸಿದ್ದಾನೆ’ ಎಂದು ಜಾರ್ಜಿಯಾ ಬ್ಯುರೋ ಆಫ್‌ ಇನ್ವೆಸ್ಟಿಗೇಷನ್‌ (ಜಿಬಿಐ) ಅಧಿಕಾರಿಗಳು ಹೇಳಿದ್ದಾರೆ.

‘ಆತನನ್ನು ಹಿಡಿಯಲು ಪೊಲೀಸರು ಯತ್ನಿಸಿದಾಗ, ಅವರ ಕೈಯಲ್ಲಿದ್ದ ಟೇಸರ್‌ (ತಪ್ಪಿಸಿಕೊಂಡು ಹೋಗುವವರತ್ತ ವಿದ್ಯುತ್‌ ತರಂಗ ಹೊರಹೊಮ್ಮಿಸಿ, ಅವರು ಚಲಿಸದಂತೆ ಮಾಡಲು ಪೊಲೀಸರು ಉಪಯೋಗಿಸುವ ಸಾಧನ) ಕಿತ್ತುಕೊಂಡ ಬ್ರೂಕ್ಸ್‌, ಓಡಿ ಹೋಗುತ್ತಿದ್ದಾಗ ಪೊಲೀಸರು ಗುಂಡು ಹಾರಿಸಿದರು’ ಎಂದೂ ಜಿಬಿಐ ಅಧಿಕಾರಿಗಳು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.