ADVERTISEMENT

ಆಸ್ಟ್ರೇಲಿಯಾದಲ್ಲಿ ಹಿಂದೂ ದೇಗುಲಗಳ ಮೇಲೆ ದಾಳಿಗೆ ಅವಕಾಶವಿಲ್ಲ: ಆಸೀಸ್ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 11:18 IST
Last Updated 11 ಮಾರ್ಚ್ 2023, 11:18 IST
   

ನವದೆಹಲಿ: ಧಾರ್ಮಿಕ ಕಟ್ಟಡಗಳ ಮೇಲಿನ ಯಾವುದೇ ಆಕ್ರಮಣ ಮತ್ತು ದಾಳಿಯಂತಹ ಮಿತಿ ಮೀರಿದ ವರ್ತನೆಯನ್ನು ಆಸ್ಟ್ರೇಲಿಯಾ ಸಹಿಸುವುದಿಲ್ಲ. ಹಾಗಾಗಿ, ಹಿಂದೂ ದೇಗಲಗಳ ಮೇಲೆ ಅಂತಹ ದಾಳಿಗೆ ಅವಕಾಶ ಇಲ್ಲ ಎಂದು ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಆಲ್ಬನೀಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಭಾರತದ ದೇಗುಲಗಳಿಗೆ ರಕ್ಷಣೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಗೆ ನೀಡಿರುವ ಭರವಸೆ ಕುರಿತಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಆಸ್ಟ್ರೇಲಿಯಾ ಎಲ್ಲ ಜನರ ನಂಬಿಕೆಗಳನ್ನು ಗೌರವಿಸುವ ದೇಶವಾಗಿದೆ ಎಂದು ನಾನು ಮೋದಿಗೆ ಭರವಸೆ ನೀಡಿದ್ದೇನೆ. ದೇಗುಲ, ಮಸೀದಿ, ಚರ್ಚ್ ಸೇರಿದಂತೆ ಯಾವುದೇ ಧಾರ್ಮಿಕ ಕಟ್ಟಡಗಳ ಮೇಲೆ ದಾಳಿಗೆ ನಮ್ಮಲ್ಲಿ ಅವಕಾಶ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ನಮ್ಮ ಪೊಲೀಸ್ ಇಲಾಖೆ ಮೂಲಕ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಯಾರಾದರೂ ಆ ರೀತಿಯ ಕೃತ್ಯದಲ್ಲಿ ಭಾಗಿಯಾಗಿದ್ದರೆ, ಅವರ ವಿರುದ್ಧ ಕಾನೂನಿನಡಿ ಕ್ರಮ ಕೈಗೊಳ್ಳುವುದನ್ನು ನಮ್ಮ ಭದ್ರತಾ ಸಂಸ್ಥೆಗಳು ಖಚಿತಪಡಿಸಲಿವೆ. ಆಸ್ಟ್ರೇಲಿಯಾದಲ್ಲಿ ಅಂತಹ ಕೃತ್ಯಗಳಿಗೆ ಅವಕಾಶವಿಲ್ಲ. ನಮ್ಮದು ಬಹುಸಂಸ್ಕೃತಿ ಸಹಿಷ್ಣು ದೇಶವಾಗಿದೆ’ ಎಂದು ಅವರು ಹೇಳಿದರು.

ಆಸ್ಟ್ರೇಲಿಯಾದಲ್ಲಿ ದೇಗುಲಗಳ ಮೇಲೆ ಇತ್ತೀಚೆಗೆ ನಡೆದ ದಾಳಿಗಳ ಕುರಿತಂತೆ ಪ್ರಧಾನಿ ಮೋದಿ, ಆಸೀಸ್ ಪ್ರಧಾನಿ ಆಲ್ಬನೀಸ್ ಗಮನ ಸೆಳೆದಿದ್ದರು. ಹಿಂದೂಗಳ ದೇಗುಲಗಳಿಗೆ ಸಂಪೂರ್ಣ ರಕ್ಷಣೆ ನೀಡುವುದಾಗಿ ಆಸೀಸ್ ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ಮೋದಿ ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.