ಬೀಜಿಂಗ್: ಜೈಷ್–ಎ–ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಅನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮೇಲೆ ಒತ್ತಡ ಹೇರುತ್ತಿರುವ ಅಮೆರಿಕದ ನಡೆಯನ್ನು ಚೀನಾ ತೀವ್ರವಾಗಿ ಖಂಡಿಸಿದೆ.
ಅಲ್ಲದೆ ಚೀನಾ ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶವಾಗಿದೆ ಎಂಬ ಅಮೆರಿಕದ ಆರೋಪವನ್ನು ಅದು ಅಲ್ಲಗಳೆದಿದೆ.
ಅಜರ್‌ನನ್ನು ಉಗ್ರಪಟ್ಟಿಗೆ ಸೇರಿಸಲು ತೊಡಕಾಗಿರುವ ಚೀನಾದ ಈ ನಡೆಯನ್ನು ಖಂಡಿಸಿರುವ ಅಮೆರಿಕ ಕಾರ್ಯದರ್ಶಿ ಮೈಕ್ ಪೊಂಪಿಯೊ, ಮುಸ್ಲಿಂರಿಗೆ ಸಂಬಂಧಿಸಿದಂತೆ ಚೀನಾ ‘ನಾಚಿಕೆಯಿಲ್ಲದ ಬೂಟಾಟಿಕೆ’ ತೋರುತ್ತಿದೆ. ಒಂದೆಡೆ ಚೀನಾ ತನ್ನ ದೇಶದಲ್ಲಿನ 10 ಲಕ್ಷಕ್ಕೂ ಹೆಚ್ಚು ಮುಸ್ಲಿಂರನ್ನು ನಿಂದಿಸುತ್ತದೆ, ಇನ್ನೊಂದೆಡೆ ಮುಸ್ಲಿಂ ಭಯೋತ್ಪಾದಕ ಸಂಘಟನೆಗಳ ರಕ್ಷಣೆಗೆ ನಿಂತಿದೆ’ ಎಂದು ದೂರಿದ್ದಾರೆ.
ಅಮೆರಿಕದ ಈ ಹೇಳಿಕೆಯನ್ನು ಅಲ್ಲಗಳೆದಿರುವ ಚೀನಾದ ವಿದೇಶಾಂತ ಸಚಿವಾಲಯದ ವಕ್ತಾರ ಜೆಂಗ್ ಶುಂಗ್, ‘ಅಜರ್ ಅನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಬೇಕೆಂಬ ಪ್ರಸ್ತಾವನೆಯನ್ನು ಸಮಗ್ರ ಪರಿಶೀಲನೆಗೆ ಒಳಪಡಿಸಿದ್ದೇವೆ. ಈ ಸಂಬಂಧ ನಿರ್ಧಾರಕ್ಕೆ ಬರಲು ಇನ್ನಷ್ಟು ಸಮಯಾವಕಾಶ ಬೇಕಾಗುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಅಮೆರಿಕ ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯಿಡಬೇಕು. ಅನಗತ್ಯವಾಗಿ ಒತ್ತಡ ಹೇರಿ ವಿಷಯವನ್ನು ಸಂಕೀರ್ಣಗೊಳಿಸಬಾರದು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.