1971ರ ಬಾಂಗ್ಲದೇಶ ವಿಮೋಚನಾ ಯುದ್ಧದ ಹೋರಾಟಗಾರ ಸೇರಿದಂತೆ ಇತರ ಹಲವರನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದರು
(ಪಿಟಿಐ ಚಿತ್ರ)
ಢಾಕಾ: 1971ರ ಬಾಂಗ್ಲದೇಶ ವಿಮೋಚನಾ ಯುದ್ಧದ ಹೋರಾಟಗಾರ ಸೇರಿದಂತೆ ಹಲವರನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ. ಬಂಧನಕ್ಕೆ ಒಳಗಾದವರು ನಡೆಸುತ್ತಿದ್ದ ಸಭೆಯಲ್ಲಿ ಗುಂಪೊಂದು ಹಿಂಸಾಚಾರ ನಡೆಸಿದ್ದು, ಸಭೆ ನಡೆಸುತ್ತಿದ್ದವರನ್ನು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ‘ಪ್ಯಾಸಿಸ್ಟ್ ಆಡಳಿತ’ದ ಸಹಚರರು ಎಂದು ಕರೆದಿದ್ದಾರೆ.
ಪ್ರತ್ಯಕ್ಷದರ್ಶಿಗಳು ಮತ್ತು ಮಾಧ್ಯಮ ವರದಿಗಳ ಪ್ರಕಾರ, ಹೊಸದಾಗಿ ರಚಿಸಲಾಗಿದ್ದ ‘ಮೊಂಚೊ 71’ ಎಂಬ ಸಂಘಟನೆಯ ಅಡಿಯಲ್ಲಿ 1971ರ ಸ್ವಾತಂತ್ಯ್ರ ಹೋರಾಟಗಾರರು, ಶಿಕ್ಷಣ ತಜ್ಞರು ಮತ್ತು ಮಾಜಿ ಅಧಿಕಾರಿಗಳು ಢಾಕಾದ ರಿಪೋರ್ಟರ್ಸ್ ಯೂನಿಟಿ ಆಡಿಯೋಟರಿಯಂನಲ್ಲಿ ಒಟ್ಟುಗೂಡಿದ್ದರು. ಈ ವೇಳೆ ಉದ್ರಿಕ್ತ ಜನರ ಗುಂಪು ಸ್ಥಳಕ್ಕೆ ನುಗ್ಗಿದೆ.
‘ಈ ಹಿಂದಿನ ಸರ್ಕಾರವನ್ನು ಪತನ ಮಾಡಿದ ‘ಜುಲೈ ದಂಗೆ’ ವಿರುದ್ಧ ಪಿತೂರಿ ನಡೆಸಲು ಮಾಜಿ ಪ್ರಧಾನಿ ಹಸೀನಾ ಅವರ ಸಹಚರರು ಇಲ್ಲಿ ಸೇರಿದ್ದಾರೆ’ ಎಂದು ಹಿಂಸಾಚಾರ ನಡೆಸಿದ ಪ್ರತಿಭಟನಾಕಾರರು ಆರೋಪಿಸಿದ್ದಾರೆ.
1971 ರ ವಿಮೋಚನಾ ಯುದ್ಧ, ಬಾಂಗ್ಲಾದೇಶದ ಪಿತಾಮಹ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್, 1972ರ ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ’ಯನ್ನು ಎತ್ತಿಹಿಡಿಯುವುದಾಗಿ ಪ್ರತಿಪಾದಿಸಿ ಈ ತಿಂಗಳ ಆರಂಭದಲ್ಲಿ ‘ಮೊಂಚೊ 71’ ಸಂಘಟನೆಯನ್ನು ಪ್ರಾರಂಭಿಸಲಾಗಿತ್ತು.
ಕಳೆದ ವರ್ಷ ವಿದ್ಯಾರ್ಥಿಗಳ ನೇತೃತ್ವದ ಬೃಹತ್ ಚಳುವಳಿಯಿಂದಾಗಿ ಹಸೀನಾ ಅವರ ಸರ್ಕಾರವನ್ನು ಪದಚ್ಯುತಗೊಳಿಸಲಾಯಿತು. ಅವರು ಆಗಸ್ಟ್ 5, 2024 ರಂದು ದೇಶವನ್ನು ತೊರೆದರು. ಅದಾಗಿ ಮೂರು ದಿನಗಳ ನಂತರ ಮುಹಮ್ಮದ್ ಯೂನಸ್ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.