ಢಾಕಾ: 1971ರ ನರಮೇಧದ ಕುರಿತು ಪಾಕಿಸ್ತಾನ ಕ್ಷಮೆಯಾಚಿಸಬೇಕು ಎಂಬ ಆಗ್ರಹವೂ ಸೇರಿದಂತೆ ಪಾಕಿಸ್ತಾನದೊಂದಿಗೆ ಬಹುಕಾಲದಿಂದ ಇತ್ಯರ್ಥವಾಗದೆ ಉಳಿದಿರುವ ವಿವಿಧ ವಿಚಾರಗಳನ್ನು ಬಾಂಗ್ಲಾದೇಶ ಪ್ರಸ್ತಾಪಿಸಿದೆ.
ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಪಾಕಿಸ್ತಾನಿ ವಿದೇಶಾಂಗ ಸಚಿವ ಇಶಾಖ್ ಡಾರ್ ಅವರೊಂದಿಗೆ ಮಧ್ಯಂತರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಎಂ.ತೌಶಿದ್ ಹುಸೈನ್ ಅವರು ಈ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.
‘1971ರ ಘಟನೆ ಕುರಿತ ಕ್ಷಮೆಯಾಚನೆ ಸೇರಿದಂತೆ ಬಹುಕಾಲದಿಂದ ಇತ್ಯರ್ಥವಾಗದೆ ಉಳಿದಿರುವ ವಿವಿಧ ವಿಚಾರಗಳ ಬಗ್ಗೆ ಸಚಿವ ಡಾರ್ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. 54 ವರ್ಷಗಳಿಂದ ಬಗೆಹರಿಯದ ಸಮಸ್ಯೆಗಳು ಒಂದೇ ದಿನದಲ್ಲಿ ಬಗೆಹರಿಯಲಿ ಎಂದು ಬಯಸುವುದು ತಪ್ಪು. ಆದರೂ, ಈ ವಿಚಾರಗಳಿಗೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿವೆ’ ಎಂದೂ ಹುಸೈನ್ ತಿಳಿಸಿದ್ದಾರೆ.
ಡಾರ್ ಅವರೂ ಈ ಬಗ್ಗೆ ಪ್ರತಿಕ್ರಿಯಿಸಿ,‘1974ರಲ್ಲಿ ಭಾರತವು ಒಳಗೊಂಡಂತೆ ನಡೆದ ತ್ರಿಪಕ್ಷೀಯ ಸಭೆ ಹಾಗೂ ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಪರ್ವೇಜ್ ಮುಷರಫ್ ಅವರು ಢಾಕಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೇ ನರಮೇಧದ ವಿಚಾರವನ್ನು ಇತ್ಯರ್ಥ ಗೊಳಿಸಲಾಗಿದೆ’ ಎಂದಿದ್ದಾರೆ.
ಬಾಂಗ್ಲಾ ನಾಯಕರ ಜತೆ ಡಾರ್ ಸಭೆ:
ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿಗೊಳಿಸುವ ನಿಟ್ಟಿನಲ್ಲಿ ಬಾಂಗ್ಲಾದ ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಜತೆಗೆ ಇಶಾಖ್ ಡಾರ್ ಅವರು ಸರಣಿ ಮಾತುಕತೆ ಸಭೆಗಳನ್ನು ನಡೆಸಿದ್ದಾರೆ. ಬಾಂಗ್ಲಾದ ಮಾಜಿ ಪ್ರಧಾನಿ ಖಲೀದಾ ಜಿಯಾ ನೇತೃತ್ವದ ಬಿಎನ್‌ಪಿ ಪಕ್ಷದ ನಾಯಕರ ಜತೆಗೆ ಹಾಗೂ ದೇಶದ ಅತಿದೊಡ್ಡ ರಾಜಕೀಯ ಪಕ್ಷವಾಗಿರುವ ಜಮಾತ್–ಇ–ಇಸ್ಲಾಮಿ ನಾಯಕರ ಜತೆಗೆ ಸಭೆ ನಡೆಸಿದ್ದಾರೆ. ಇತ್ತೀಚೆಗೆ ರೂಪುಗೊಂಡ ವಿದ್ಯಾರ್ಥಿಗಳ ನೇತೃತ್ವದ ಪಕ್ಷ ಎನ್‌ಸಿಪಿ ನಾಯಕರೊಂದಿಗೂ ಢಾಕಾದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯಲ್ಲಿ ಸಭೆ ನಡೆಸಲಾಗಿದೆ. ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್) ಪುನರುಜ್ಜೀವನ ಬಾಂಗ್ಲಾದಲ್ಲಿ ನ್ಯಾಯಸಮ್ಮತ ಸಾರ್ವತ್ರಿಕ ಚುನಾವಣೆಯ ಖಾತರಿ ಸೇರಿದಂತೆ ವಿವಿಧ ವಿಚಾರಗಳನ್ನು ಚರ್ಚಿಸಿರುವುದಾಗಿ ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.