
ಬಾಂಗ್ಲಾದಲ್ಲಿ ಪ್ರಬಲ ಭೂಕಂಪ
ಢಾಕಾ/ಕೋಲ್ಕತ್ತ: ಬಾಂಗ್ಲಾದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು 7 ಜನರು ಮೃತಪಟ್ಟಿದ್ದಾರೆ. ತ್ರಿಪುರ ಹಾಗೂ ಕೋಲ್ಕತ್ತದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.
ಭೂಕಂಪ ವಿಜ್ಞಾನ ಸಂಶೋಧನ ಸಂಸ್ಥೆಯ ಪ್ರಕಾರ ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಬಾಂಗ್ಲಾ ರಾಜಧಾನಿ ಢಾಕಾ ಸಮೀಪದಲ್ಲಿ ಭೂಮಿಯ 10 ಕಿ.ಮೀ ಆಳದಲ್ಲಿ ಕೇಂದ್ರ ಬಿಂದು ದಾಖಲಾಗಿದೆ.
ಬಾಂಗ್ಲಾ ಸರ್ಕಾರದ ಮಾಹಿತಿ ಪ್ರಕಾರ 7 ಜನರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಕೆಲ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದರ ತೀವ್ರತೆಗೆ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಸೇರಿದಂತೆ ಕೂಚ್ ಬಿಹಾರ್, ದಕ್ಷಿಣ ಮತ್ತು ಉತ್ತರ ದಿನಾಜ್‌ಪುರ ಜಿಲ್ಲೆಗಳು ಸೇರಿದಂತೆ ತ್ರಿಪುರದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಮನೆಯಲ್ಲಿದ್ದ ಫೋಟೊಗಳು, ಫ್ಯಾನುಗಳು ಮತ್ತು ಗೋಡೆಗೆ ಹಾಕಿದ್ದ ವಸ್ತುಗಳು ಅಲುಗಾಡಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತ್ರಿಪುರ ಹಾಗೂ ಪಶ್ಚಿಮ ಬಂಗಾಳದಲ್ಲಿ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.