ಢಾಕಾ: ಬಾಂಗ್ಲಾದೇಶದ ರಂಗಪುರ ಜಿಲ್ಲೆಯ ಗಂಗಾಚಾರಾ ಉಪಜಿಲ್ಲೆಯ ಗ್ರಾಮವೊಂದರಲ್ಲಿ ಗುಂಪೊಂದು ದಾಳಿ ಮಾಡಿದ್ದು, ಹಿಂದೂ ಸಮುದಾಯಕ್ಕೆ ಸೇರಿದ 12 ಮನೆಗಳಿಗೆ ಹಾನಿಯಾಗಿದೆ.
ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರವು ಹಾನಿಯಾಗಿರುವ ಮನೆಗಳ ದುರಸ್ತಿಗೆ ಆದೇಶಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ವಿವರ: 17 ವರ್ಷದ ಹಿಂದೂ ಬಾಲಕನೊಬ್ಬ, ಪ್ರವಾದಿಗಳ ಕುರಿತ ಅವಹೇಳನಕಾರಿ ಹೇಳಿಕೆಯನ್ನು ಫೇಸ್‌ಬುಕ್‌ನಲ್ಲಿ ಶನಿವಾರ ಪೋಸ್ಟ್ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ದೂರು ಸಲ್ಲಿಕೆಯಾಗಿತ್ತು.
‘ಆರೋಪಗಳು ನಿಜವೆಂದು ಕಂಡು ಬಂದ ಕಾರಣ, ಶನಿವಾರ ರಾತ್ರಿ 8.30ಕ್ಕೆ ಬಾಲಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬರಲಾಯಿತು. ನ್ಯಾಯಾಲಯದ ಆದೇಶದ ಮೇರೆ ಆತನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ’ ಎಂದು ಗಂಗಾಚಾರಾ ಪೊಲೀಸ್ ಠಾಣೆ ಅಧಿಕಾರಿ ಅಲ್ ಇಮ್ರಾನ್ ತಿಳಿಸಿದ್ದಾರೆ.
ಈ ಸುದ್ದಿ ಹಬ್ಬುತ್ತಿದ್ದಂತೆಯೇ, ರೊಚ್ಚಿಗೆದ್ದ ಸ್ಥಳೀಯರು ಹಿಂದೂ ಸಮುದಾಯದ ಮನೆಗಳ ಮೆಲೆ ಶನಿವಾರ ರಾತ್ರಿ ಹಾಗೂ ಭಾನುವಾರ ಮಧ್ಯಾಹ್ನ ದಾಳಿ ನಡೆಸಿ, ಹಲವಾರು ಮನೆಗಳನ್ನು ನಾಶ ಮಾಡಿದರು. ನಂತರ, ಸೇನೆಯನ್ನು ಸ್ಥಳಕ್ಕೆ ಹಳುಹಿಸಿ, ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು ಎಂದು ಬಾಂಗ್ಲಾ ದೈನಿಕ ಪ್ರೊಥೋಮ್ ಅಲೊ ವರದಿ ಮಾಡಿದೆ.
ಬಂಧಿತ ಬಾಲಕ, ಖಾಸಗಿ ಪಾಲಿಟೆಕ್ನಿಕ್‌ನಲ್ಲಿ ಮೂರನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾನೆ ಎಂದು ಪತ್ರಿಕೆ ವರದಿ ಮಾಡಿದೆ.
‘ಬಂಧಿತ ಬಾಲಕ ಹಾಗೂ ಆತನ ಸಂಬಂಧಿಯದ್ದು ಸೇರಿ ಮೂರು ಕುಟುಂಬಗಳು ಸಮೀಪದ ಹಳ್ಳಿಯ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡಿವೆ’ ಎಂದು ಯೂನುಸ್ ಅವರ ಕಚೇರಿ ತಿಳಿಸಿದೆ.
‘ದಾಳಿಗೆ ಒಳಗಾಗಿರುವ 22 ಕುಟುಂಬಗಳ ಪೈಕಿ 19 ಕುಟುಂಬಗಳ ಪುರುಷ ಸದಸ್ಯರು, ತಮ್ಮ ಮನೆಗಳಲ್ಲಿಯೇ ಉಳಿದುಕೊಂಡಿದ್ದಾರೆ. ಮನೆಗಳು ಹಾನಿಗೊಂಡಿರುವ ಕಾರಣ, ಮಹಿಳಾ ಸದಸ್ಯರು ಬೇರೆಯವರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ’ ಎಂದು ರಂಗಪುರ ಜಿಲ್ಲಾಧಿಕಾರಿ ಮೊಹಮ್ಮದ್ ರಬಿವುಲ್ ಫೈಸಲ್ ಹೇಳಿದ್ದಾರೆ.
‘ದಾಳಿ ಮತ್ತು ಹಿಂಸಾಚಾರದಲ್ಲಿ ತೊಡಗಿರುವವರ ಗುರುತು ಪತ್ತೆ ಹಚ್ಚುವ ಪ್ರಕ್ರಿಯೆ ನಡೆದಿದ್ದು, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಗ್ರಾಮದಲ್ಲಿ ಸೌಹಾರ್ದ ಮರುಸ್ಥಾಪನೆಗಾಗಿ ನಾಗರಿಕ ಸಂಘಟನೆಗಳು, ಸ್ಥಳೀಯ ಆಡಳಿತ ಹಾಗೂ ಪೊಲೀಸರ ನೆರವಿನೊಂದಿಗೆ ಶ್ರಮಿಸುತ್ತಿವೆ’ ಎಂದು ಪತ್ರಿಕೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.