ವಾಷಿಂಗ್ಟನ್: ಹೊಸದಾಗಿ ಲಸಿಕೆ ಹಾಕಿಸಿಕೊಳ್ಳುವ ಪ್ರತಿಯೊಬ್ಬರಿಗೂ 100 ಡಾಲರ್ ( ₹7,400ಕ್ಕಿಂತ ಹೆಚ್ಚು) ಪ್ರೋತ್ಸಾಹಧನ ನೀಡುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ ಎಂದು ದೇಶದ ಹಣಕಾಸು ಇಲಾಖೆ ಗುರುವಾರ ಹೇಳಿದೆ.
ಕೋವಿಡ್ 19 ಲಸಿಕೀಕರಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬೈಡನ್ ಈ ಹೆಜ್ಜೆ ಇಟ್ಟಿದ್ದಾರೆ.
ಈ ಕುರಿತು ಮಾತನಾಡಿರುವ ಜೋ ಬೈಡನ್, ‘ಹೊಸದಾಗಿ ಲಸಿಕೆ ಪಡೆಯುವವರಿಗಷ್ಟೇ ಪ್ರೋತ್ಸಾಹ ಧನ ನೀಡುವುದರಿಂದ, ಈಗಾಗಲೇ ಲಸಿಕೆ ಪಡೆದವರಿಗೆ ಅನ್ಯಾಯವಾಗಲಿದೆ ಎಂಬುದು ನನ್ನ ಗಮನದಲ್ಲಿದೆ. ಆದರೆ, ಪ್ರೋತ್ಸಾಹಧನದಂಥ ಕ್ರಮಗಳು ವೈರಸ್ ಅನ್ನು ಸೋಲಿಸಲು ನೆರವಾಗುತ್ತವೆ ಎಂದಾದರೆ, ನಾವು ಅದನ್ನು ಬಳಸಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ,’ ಎಂದು ಹೇಳಿದ್ದಾರೆ.
ಅಮೆರಿಕ ಪರಿಹಾರ ನಿಧಿ ಯೋಜನೆ ಕಾಯ್ದೆಯಡಿ ರಾಜ್ಯ, ಸ್ಥಳೀಯ, ಪ್ರಾದೇಶಿಕ ಸರ್ಕಾರಗಳಿಗೆ ನೀಡುವ 350 ದಶಕೋಟಿ ಡಾಲರ್ (₹2600 ಕೋಟಿಗೂ ಹೆಚ್ಚು) ನೆರವಿನಿಂದ ಪ್ರೋತ್ಸಾಹ ಧನ ವಿತರಿಸಲಾಗುತ್ತದೆ ಎಂದು ಹಣಕಾಸು ಇಲಾಖೆ ತಿಳಿಸಿದೆ. ಅಲ್ಲದೆ, ಈ ಕ್ರಮವು ಕೋವಿಡ್ ಲಸಿಕಾ ಅಭಿಯಾನಕ್ಕೆ ಬಲ ನೀಡಲಿದೆ ಎಂದೂ ಇಲಾಖೆ ಅಭಿಪ್ರಾಯಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.