ADVERTISEMENT

ಅಲ್‌ಕೈದಾ ಜೊತೆಗೆ ಸಂಪರ್ಕವಿಟ್ಟುಕೊಂಡಿದ್ದ ಪಾಕಿಸ್ತಾನ ಗುಪ್ತಚರ ವಿಭಾಗ

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಮಾಹಿತಿ

ಪಿಟಿಐ
Published 17 ನವೆಂಬರ್ 2020, 11:35 IST
Last Updated 17 ನವೆಂಬರ್ 2020, 11:35 IST
2011 ಮೇ 1ರಂದು ಲಾಡೆನ್‌ ವಿರುದ್ಧದ ಕಾರ್ಯಾಚರಣೆ ಸಂದರ್ಭದಲ್ಲಿ ಶ್ವೇತಭವನದ ಕೊಠಡಿಯೊಂದರಲ್ಲಿ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದ ಬರಾಕ್‌ ಒಬಾಮಾ ಹಾಗೂ ಜೋ ಬೈಡನ್‌ (ಸಂಗ್ರಹ ಚಿತ್ರ)
2011 ಮೇ 1ರಂದು ಲಾಡೆನ್‌ ವಿರುದ್ಧದ ಕಾರ್ಯಾಚರಣೆ ಸಂದರ್ಭದಲ್ಲಿ ಶ್ವೇತಭವನದ ಕೊಠಡಿಯೊಂದರಲ್ಲಿ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದ ಬರಾಕ್‌ ಒಬಾಮಾ ಹಾಗೂ ಜೋ ಬೈಡನ್‌ (ಸಂಗ್ರಹ ಚಿತ್ರ)   

ವಾಷಿಂಗ್ಟನ್‌: ‘ಪಾಕಿಸ್ತಾನ ಸೇನೆಯಲ್ಲಿರುವ ಕೆಲವರು ಹಾಗೂ ಪ್ರಮುಖವಾಗಿ ಅದರ ಗುಪ್ತಚರ ವಿಭಾಗದವರು, ಉಗ್ರ ಸಂಘಟನೆಗಳಾದ ತಾಲಿಬಾನ್‌ ಹಾಗೂ ಅಲ್‌ಕೈದಾ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರು ಎನ್ನುವುದು ಎಲ್ಲರಿಗೂ ತಿಳಿದಿತ್ತು. ಹೀಗಾಗಿ ಅಲ್‌ಕೈದಾ ಉಗ್ರ ಸಂಘಟನೆ ಸಂಸ್ಥಾಪಕ ಒಸಮಾ ಬಿನ್‌ ಲಾಡೆನ್‌ ವಿರುದ್ಧದ ಕಾರ್ಯಾಚರಣೆಗೆ ಪಾಕಿಸ್ತಾನ ಸೇನೆಯನ್ನು ಸೇರಿಸಿಕೊಳ್ಳುವುದನ್ನು ನಾನು ನಿರಾಕರಿಸಿದ್ದೆ’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಹೇಳಿದ್ದಾರೆ.

ಈ ಕುರಿತು ತಮ್ಮ ನೂತನ ಕೃತಿ ‘ಎ ಪ್ರಾಮಿಸ್ಡ್‌ ಲ್ಯಾಂಡ್‌’ನಲ್ಲಿ ಉಲ್ಲೇಖಿಸಿರುವ ಒಬಾಮಾ, ವಿಶ್ವದ ‘ಮೋಸ್ಟ್‌ ವಾಂಟೆಂಡ್‌’ ಉಗ್ರ ಲಾಡೆನ್‌ ವಿರುದ್ಧ ಅಮೆರಿಕದ ಯೋಧರು 2011ರ ಮೇ 2ರಂದು ನಡೆಸಿದ ದಾಳಿಯ ವಿಸ್ತೃತ ವಿವರಣೆಯನ್ನು ನೀಡಿದ್ದಾರೆ.

‘ಅಲ್‌ಕೈದಾ, ತಾಲಿಬಾನ್‌ ಸಂಘಟನೆಗಳನ್ನೇ ಅಫ್ಗಾನಿಸ್ತಾನ ಹಾಗೂ ಭಾರತದ ವಿರುದ್ಧದ ದಾಳಿಗೆ ಪಾಕಿಸ್ತಾನ ಬಳಸಿಕೊಳ್ಳುತ್ತಿದೆ ಎನ್ನುವುದು ರಹಸ್ಯವಾಗಿ ಉಳಿದಿಲ್ಲ. ಲಾಡೆನ್‌ ವಿರುದ್ಧದ ರಹಸ್ಯ ದಾಳಿಯನ್ನು ಅಂದಿನ ರಕ್ಷಣಾ ಕಾರ್ಯದರ್ಶಿ ರಾಬರ್ಟ್‌ ಗೇಟ್ಸ್‌ ಹಾಗೂ ಅಂದು ಉಪಾಧ್ಯಕ್ಷರಾಗಿದ್ದ ಜೋ ಬೈಡನ್‌ ವಿರೋಧಿಸಿದ್ದರು. ಪಾಕಿಸ್ತಾನ ಸೇನೆಯ ಕಂಟೋನ್ಮೆಂಟ್‌ನ ಸಮೀಪದಲ್ಲೇ ಲಾಡೆನ್‌ ಅಡಗಿರುವುದು ಖಚಿತವಾದ ಬಳಿಕ, ಆತನನ್ನು ಹೊಡೆದುರುಳಿಸಲು ಹಲವು ಆಯ್ಕೆಗಳನ್ನು ನಾವು ಚರ್ಚಿಸಿದ್ದೆವು. ಈ ದಾಳಿಯನ್ನು ರಹಸ್ಯವಾಗಿರಿಸುವುದೇ ನಮಗೆ ದೊಡ್ಡ ಸವಾಲಾಗಿತ್ತು. ಸಣ್ಣ ಮಾಹಿತಿಯೂ ಸೋರಿಕೆಯಾದಲ್ಲಿ, ನಮಗಿದ್ದ ಅವಕಾಶ ಕೈತಪ್ಪಿಹೋಗುತ್ತಿತ್ತು ಎನ್ನುವುದು ತಿಳಿದಿತ್ತು. ಹೀಗಾಗಿ ಬೆರಳೆಣಿಕೆಯಷ್ಟೇ ಜನರು ಈ ದಾಳಿಯ ಯೋಜನೆಯನ್ನು ರೂಪಿಸಿದ್ದೆವು’ ಎಂದು ಒಬಾಮಾ ಉಲ್ಲೇಖಿಸಿದ್ದಾರೆ.

ADVERTISEMENT

‘ನಮಗೆ ಮತ್ತೊಂದು ನಿರ್ಬಂಧವಿತ್ತು. ಯಾವುದೇ ಆಯ್ಕೆಯನ್ನು ನಾವು ತೆಗೆದುಕೊಂಡರೂ, ಪಾಕಿಸ್ತಾನವನ್ನು ಸೇರಿಸಿಕೊಳ್ಳದೇ ಅದನ್ನು ಕಾರ್ಯರೂಪಕ್ಕೆ ತರಬೇಕಿತ್ತು. ಅಫ್ಗಾನಿಸ್ತಾನದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಹಾಗೂ ನಮ್ಮ ಯೋಧರಿಗೆ ಪಾಕಿಸ್ತಾನ ಸರ್ಕಾರವು ನೆರವು ನೀಡಿದ್ದರೂ, ಪಾಕಿಸ್ತಾನ ಸೇನೆ ಹಾಗೂ ಗುಪ್ತಚರ ವಿಭಾಗದಲ್ಲಿನ ಕೆಲವರು ಅಲ್‌ಕೈದಾ, ತಾಲಿಬಾನ್‌ ಜೊತೆ ಸಂಪರ್ಕ ಹೊಂದಿದ್ದರು. ಈ ಮೂಲಕ ಭಾರತದ ಜೊತೆ ಅಫ್ಗಾನಿಸ್ತಾನವು ಒಮ್ಮತದಿಂದ ಇರದಂತೆ, ಅಲ್ಲಿನ ಸರ್ಕಾರವನ್ನು ಪಾಕಿಸ್ತಾನ ಈ ಉಗ್ರ ಸಂಘಟನೆ ಮುಖಾಂತರ ದುರ್ಬಲಗೊಳಿಸುತ್ತಿತ್ತು’ ಎಂದು ಒಬಾಮಾ ಹೇಳಿದ್ದಾರೆ.

‘ಲಾಡೆನ್‌ ಅಡಗಿದ್ದ ಸ್ಥಳವು ಪಾಕಿಸ್ತಾನ ಸೇನೆಯ ಕಂಟೋನ್ಮೆಂಟ್‌ಗೆ ಕೆಲವೇ ಮೈಲುಗಳ ಅಂತರದಲ್ಲಿತ್ತು. ಹೀಗಾಗಿ ಪಾಕಿಸ್ತಾನಕ್ಕೆ ನಾವೇನಾದರೂ ವಿಷಯ ತಿಳಿಸಿದ್ದರೆ, ಲಾಡೆನ್‌ ಪರಾರಿಯಾಗುತ್ತಿದ್ದ. ಮೊದಲು ನಾವು ಲಾಡೆನ್‌ ಅಡಗಿದ್ದ ಸ್ಥಳವನ್ನು ವೈಮಾನಿಕ ದಾಳಿ(ಏರ್‌ಸ್ಟ್ರೈಕ್‌) ಮುಖಾಂತರ ಧ್ವಂಸಗೊಳಿಸಲು ನಿರ್ಧರಿಸಿದ್ದೆವು. ಎರಡನೇ ಆಯ್ಕೆಯಲ್ಲಿ, ಸ್ಪೆಷಲ್‌ ಓಪ್ಸ್‌ (ವಿಶೇಷ ಯೋಧರ ತಂಡ) ಮೂಲಕ ಪಾಕಿಸ್ತಾನದ ಒಳಗೇ ಹೋಗಿ ಲಾಡೆನ್‌ ಅಡಗಿರುವ ಸ್ಥಳದ ಮೇಲೆ ದಾಳಿ ನಡೆಸಿ, ಪಾಕಿಸ್ತಾನ ಪೊಲೀಸರು ಅಥವಾ ಸೇನೆಯ ಗಮನಕ್ಕೆ ಬರುವ ಮೊದಲೇ ಸ್ಥಳದಿಂದ ಹಿಂತಿರುಗುವ ಯೋಜನೆ ರೂಪಿಸಿದ್ದೆವು. ಎರಡನೇ ಆಯ್ಕೆಯಲ್ಲಿ ಹೆಚ್ಚಿನ ಅಪಾಯವಿದ್ದರೂ, ಅದನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು’ ಎಂದು ಉಲ್ಲೇಖಿಸಿದ್ದಾರೆ.

‘ದಾಳಿಯ ನಂತರ ಪಾಕಿಸ್ತಾನದ ರಾಷ್ಟ್ರಪತಿ ಆಸಿಫ್‌ ಅಲಿ ಜರ್ಧಾರಿ ಅವರಿಗೆ ಕರೆ ಮಾಡಿದ ಸಂದರ್ಭದಲ್ಲಿ, ‘ಇದೊಂದು ಶುಭ ಸುದ್ದಿ’ ಎಂದಿದ್ದರು. ಅವರು ತಮ್ಮ ನೈಜ ಭಾವನೆಯನ್ನು ಪ್ರದರ್ಶಿಸಿದ್ದರು’ ಎಂದು ಒಬಾಮಾ ಹೇಳಿದ್ದಾರೆ.

ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ 2001 ನ.11ರಂದು ಅಲ್‌ಕೈದಾ ದಾಳಿ ನಡೆಸಿತ್ತು. ಈ ಘಟನೆಯಲ್ಲಿ 3 ಸಾವಿರ ಜನರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.