ADVERTISEMENT

ಚೀನಾದಿಂದ ಅಮೆರಿಕ ಆಮದು ಉತ್ಪನ್ನಗಳಿಗೆ ಅಧಿಕ ಸುಂಕ

ಗೂಗಲ್‌ ವಿಶ್ವಾಸಾರ್ಹತೆಯ ತನಿಖೆಗೆ ಮುಂದಾದ ಚೀನಾ ಸರ್ಕಾರ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 14:33 IST
Last Updated 4 ಫೆಬ್ರುವರಿ 2025, 14:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌: ಚೀನಾದಿಂದ ಆಮದಾಗುವ ಉತ್ಪನ್ನಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಅಧಿಕ ಸುಂಕಕ್ಕೆ ಪ್ರತಿಯಾಗಿ, ಅಮೆರಿಕದಿಂದ ಆಮದಾಗುವ ಉತ್ಪನ್ನಗಳ ಮೇಲೆಯೂ ಚೀನಾ ಸುಂಕವನ್ನು ಹೆಚ್ಚಿಸಿದೆ. 

ಅಧಿಕ ಪ್ರಮಾಣದ ಸುಂಕ ವಿಧಿಸುವುದರ ಜೊತೆಗೆ ಗೂಗಲ್‌ನ ವಿಶ್ವಾಸಾರ್ಹತೆ ಹಾಗೂ ಇತರೆ ವ್ಯಾಪಾರಿ ಕ್ರಮಗಳ ಕುರಿತಂತೆ ತನಿಖೆ ನಡೆಸಲೂ ಚೀನಾ ಸರ್ಕಾರ ತೀರ್ಮಾನಿಸಿದೆ.

ಈ ಮಧ್ಯೆ, ಟ್ರಂಪ್‌ ಅವರು ಮುಂದಿನ ಕೆಲ ದಿನಗಳಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಜೊತೆಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಎರಡೂ ರಾಷ್ಟ್ರಗಳ ನಡುವೆ ಸುಂಕ ಸಮರ ನಡೆಯುತ್ತಿರುವುದು ಇದೇ ಮೊದಲೇನೂ ಅಲ್ಲ.

ADVERTISEMENT

2018ರಲ್ಲೂ ಟ್ರಂಪ್‌ ಅವರು ಚೀನಾ ಉತ್ಪನ್ನಗಳ ಮೇಲೆ ಸುಂಕ ಏರಿಸಿದ್ದರು. ಆಗಲೂ ಸುಂಕ ಸಮರ ನಡೆದಿತ್ತು. ಈ ಬಾರಿ ಸ್ಪರ್ಧೆಯನ್ನು ಎದುರಿಸಲು ಚೀನಾ ಹೆಚ್ಚು ಸನ್ನದ್ಧವಾಗಿದೆ ಎನ್ನುತ್ತಾರೆ ಪರಿಣತರು.

‘ಚೀನಾ ಉತ್ತಮವಾದ ರಫ್ತು ನಿಯಂತ್ರಣ ವ್ಯವಸ್ಥೆ ಹೊಂದಿದೆ. ನಾವು ವಿವಿಧ ಉತ್ಪನ್ನಗಳಿಗೆ ಚೀನಾದ ಮೇಲೆ ಅವಲಂಬಿತರಾಗಿದ್ದೇವೆ. ನಮ್ಮ ಆರ್ಥಿಕತೆ ಮೇಲೆ ಅವರು ಗಣನೀಯ ಪರಿಣಾಮ ಬೀರಬಹುದಾಗಿದೆ’ ಎಂದು ಚೀನಾ ವಿದೇಶಾಂಗ ಇಲಾಖೆಯ ಮಾಜಿ ಅಧಿಕಾರಿ ಫಿಲಿಪ್ ಲಕ್ ಪ್ರತಿಕ್ರಿಯಿಸಿದರು.

ಸೋಮವಾರದಿಂದ ಜಾರಿಗೆ ಬರುವಂತೆ ಕಚ್ಚಾ ತೈಲ, ಕೃಷಿ ಪರಿಕರಗಳು, ಅತಿ ಹೆಚ್ಚು ಸಾಮರ್ಥ್ಯದ ಎಂಜಿನ್‌ಗಳುಳ್ಳ ಕಾರುಗಳು ಸೇರಿ ಅಮೆರಿಕದ ಆಮದು ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕ ವಿಧಿಸಲಾಗುವುದು ಎಂದು ಚೀನಾ ತಿಳಿಸಿದೆ.

ಕಲ್ಲಿದ್ದಲು ಮತ್ತು ಎನ್‌ಎಲ್‌ಜಿ ಅನಿಲ ಉತ್ಪನ್ನಗಳ ಮೇಲೆ ಶೇ 15ರಷ್ಟು, ಕಚ್ಚಾ ತೈಲ, ಕೃಷಿ ಪರಿಕರಗಳು, ಬೃಹತ್ ಎಂಜಿನ್‌ವುಳ್ಳ ಕಾರುಗಳ ಮೇಲೆ ಶೇ 10ರಷ್ಟು ಸುಂಕ ವಿಧಿಸಲಾಗುವುದು ಎಂದು ತಿಳಿಸಿದೆ.

ಚೀನಾ ಅತ್ಯಧಿಕ ಪ್ರಮಾಣದಲ್ಲಿ ಎಲ್‌ಎನ್‌ಜಿ ಅನಿಲವನ್ನು ಬಹುತೇಕ ಆಸ್ಟ್ರೇಲಿಯಾ, ಕತಾರ್ ಮತ್ತು ಮಲೇಷ್ಯಾದಿಂದ ಆಮದು ಮಾಡಿಕೊಳ್ಳಲಿದೆ. ಅಮೆರಿಕ ಅತ್ಯಧಿಕ ಪ್ರಮಾಣದಲ್ಲಿ ಎಲ್‌ಎನ್‌ಜಿ ರಫ್ತು ಮಾಡುವ ದೇಶವಾಗಿದ್ದರೂ, ಚೀನಾಗೆ ರಫ್ತು ಮಾಡುತ್ತಿಲ್ಲ ಎಂಬುದು ಗಮನಾರ್ಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.