ADVERTISEMENT

ಚೀನಾ: ಕೋವಿಡ್‌ನಿಂದ ಒಂದು ವಾರದಲ್ಲಿ 13 ಸಾವಿರ ಮಂದಿ ಸಾವು

ಏಜೆನ್ಸೀಸ್
Published 22 ಜನವರಿ 2023, 10:59 IST
Last Updated 22 ಜನವರಿ 2023, 10:59 IST
   

ಬೀಜಿಂಗ್‌: ದೇಶದಲ್ಲಿ ಜನವರಿ 13 ರಿಂದ 19 ರವರೆಗೆ ಸುಮಾರು 13 ಸಾವಿರ ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ಚೀನಾ ಹೇಳಿದೆ. ದೇಶದ ಜನಸಂಖ್ಯೆಯ ಬಹುಪಾಲು ಈಗಾಗಲೇ ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ ಎಂದು ಉನ್ನತ ಆರೋಗ್ಯ ಅಧಿಕಾರಿಯೊಬ್ಬರು ಹೇಳಿರುವ ಬೆನ್ನಲ್ಲೇ ಈ ಅಂಕಿ–ಅಂಶ ಹೊರಬಂದಿದೆ.

ಕರೋನ ವೈರಸ್ ಸೋಂಕಿನಿಂದ ಉಂಟಾದ ಉಸಿರಾಟದ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾದ 681 ರೋಗಿಗಳು ಸಾವಿಗೀಡಾಗಿದ್ದಾರೆ ಮತ್ತು ಇದೇ ಅವಧಿಯಲ್ಲಿ ಸೋಂಕಿನೊಂದಿಗೆ ಇತರ ಕಾಯಿಲೆಗಳಿಂದ 11,977 ಮಂದಿ ಮೃತಪಟ್ಟಿದ್ದಾರೆ ಎಂದು ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ(ಸಿಡಿಸಿ) ಪ್ರಕಟಣೆ ತಿಳಿಸಿದೆ. ಇದರಲ್ಲಿ ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾಗದೆ ಮನೆಯಲ್ಲಿಯೇ ಮೃತಪಟ್ಟವರ ವಿವರಗಳಿಲ್ಲ.

ಇಲ್ಲಿನ ಆಸ್ಪತ್ರೆಗಳಲ್ಲಿ ಕಳೆದ ಒಂದು ತಿಂಗಳಿನಲ್ಲಿ ಸುಮಾರು 60 ಸಾವಿರ ಜನರು ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ ಎಂದು ಚೀನಾ ಹಿಂದಿನ ವಾರ ಹೇಳಿತ್ತು.

ADVERTISEMENT

ಖಾಸಗಿ ಸಂಸ್ಥೆ ಏರ್‌ಫಿನಿಟಿ, ಚೀನಾ ಹೊಸ ವರ್ಷದ ರಜಾದಿನಗಳಲ್ಲಿ ದೈನಂದಿನ ಕೋವಿಡ್ ಸಾವುಗಳು ಸುಮಾರು 36 ಸಾವಿರಕ್ಕೆ ಏರುತ್ತದೆ ಎಂದು ಅಂದಾಜಿಸಿದೆ. ಡಿಸೆಂಬರ್‌ನಲ್ಲಿ ಚೀನಾ ಶೂನ್ಯ-ಕೋವಿಡ್ ನೀತಿಯನ್ನು ಕೈಬಿಟ್ಟಿತ್ತು. ಅದರ ಬಳಿಕ 6 ಲಕ್ಷಕ್ಕೂ ಹೆಚ್ಚು ಜನರ ಈ ಸೋಂಕಿನಿಂದ ಮೃತರಾಗಿದ್ದಾರೆ ಎಂದು ಸಂಸ್ಥೆ ಅಂದಾಜಿಸಿದೆ.

ಭಾನುವಾರ ಚೀನಾದಲ್ಲಿ ಹೊಸ ವರ್ಷದ ಸಂಭ್ರಮ. ಹೀಗಾಗಿ ಕುಟುಂಬಗಳೊಂದಿಗೆ ಬಹುನಿರೀಕ್ಷಿತ ಪುನರ್ಮಿಲನಕ್ಕಾಗಿ ಹತ್ತಾರು ದಶಲಕ್ಷ ಜನರು ದೇಶಾದ್ಯಂತ ಪ್ರಯಾಣಿಸಿದ್ದಾರೆ. ಇದು ಏಕಾಏಕಿ ಕೋವಿಡ್‌ ಏರಿಕೆ ಭಯವನ್ನು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.