ADVERTISEMENT

ಬಾಹ್ಯಾಕಾಶಕ್ಕೆ ಸಾಮಾನ್ಯ ಪ್ರಜೆ ಕಳುಹಿಸಲು ಚೀನಾದ ಸಿದ್ಧತೆ

ಎಎಫ್‌ಪಿ
Published 29 ಮೇ 2023, 13:15 IST
Last Updated 29 ಮೇ 2023, 13:15 IST
ಚೀನಾದ ಜಿಯುಕ್ಯುಆನ್ ಉಪಗ್ರಹ ಉಡಾವಣೆ ಕೇಂದ್ರದ ಬಳಿ, ಬಾಹ್ಯಾಕಾಶ ಉಡಾವಣಾ ವಾಹಕದ ಬಳಿಕ ಸೋಮವಾರ ಸಿಬ್ಬಂದಿಯೊಬ್ಬರು ನಿಂತಿರುವುದು –ಎಎಫ್‌ಪಿ ಚಿತ್ರ
ಚೀನಾದ ಜಿಯುಕ್ಯುಆನ್ ಉಪಗ್ರಹ ಉಡಾವಣೆ ಕೇಂದ್ರದ ಬಳಿ, ಬಾಹ್ಯಾಕಾಶ ಉಡಾವಣಾ ವಾಹಕದ ಬಳಿಕ ಸೋಮವಾರ ಸಿಬ್ಬಂದಿಯೊಬ್ಬರು ನಿಂತಿರುವುದು –ಎಎಫ್‌ಪಿ ಚಿತ್ರ   

ಬೀಜಿಂಗ್‌: 2030ರ ವೇಳೆಗೆ ಮಾನವಸಹಿತ ಚಂದ್ರಯಾನ ಗುರಿ ಸಾಧಿಸುವ ಯೋಜನೆ ಹೊಂದಿರುವ ಚೀನಾ, ಇದೇ ಮೊದಲಿಗೆ ಟಿಯಾನ್‌ಗೊಂಗ್‌ ಬಾಹ್ಯಾಕಾಶ ಕೇಂದ್ರಕ್ಕೆ ಸಾಮಾನ್ಯ ಪ್ರಜೆಯನ್ನು ಗಗನಯಾತ್ರಿಯಾಗಿ ಕಳುಹಿಸಲು ಸಿದ್ಧತೆ ನಡೆಸಿದೆ. 

ಸೇನೆಯ ಮೇಲ್ವಿಚಾರಣೆ ಹೊಂದಿರುವ ಬಾಹ್ಯಾಕಾಶ ಯೋಜನೆಗೆ ಚೀನಾ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಈ ಮೂಲಕ ಅಮೆರಿಕ ಮತ್ತು ರಷ್ಯಾದ ಸಾಧನೆಯನ್ನು ಸರಿಗಟ್ಟಲು ಯತ್ನಿಸುತ್ತಿದೆ. ಬಾಹ್ಯಾಕಾಶಕ್ಕೆ ಚೀನಾ ಇದುವರೆಗೂ ಕಳುಹಿಸಿರುವ ಎಲ್ಲ ಗಗನಯಾತ್ರಿಗಳು, ಚೀನಾದ ಪೀಪಲ್ಸ್‌ ಲಿಬರೇಷನ್ ಆರ್ಮಿಯ ಭಾಗವಾಗಿದ್ದರು. 

‘ಬೀಜಿಂಗ್‌ನ ಬೀಹ್ಯಾಂಗ್‌ ಯೂನಿವರ್ಸಿಟಿಯ ಪ್ರೊಫೆಸರ್ ಗ್ಯೂ ಹೈಚಾವೊ ಅವರು ಯೋಜನೆಯ ಅವಧಿಯಲ್ಲಿ ಬಾಹ್ಯಾಕಾಶದಲ್ಲಿ ವೈಜ್ಞಾನಿಕ ಸಂಶೋಧನೆ ನಡೆಸುವರು‘ ಎಂದು ಚೀನಾ ಬಾಹ್ಯಾಕಾಶ ಸಂಸ್ಥೆ (ಸಿಎಂಎಸ್‌ಎ) ವಕ್ತಾರರು ಸೋಮವಾರ ತಿಳಿಸಿದರು.

ADVERTISEMENT

‘ನಾನು ಸದಾ ಇಂಥದೊಂದು ಕನಸು ಕಾಣುತ್ತಿದ್ದೆ’ ಎಂದು ಗ್ಯೂ ಸುದ್ದಿಗಾರರಿಗೆ ತಿಳಿಸಿದರು. ‘ಗ್ಯೂ ಅವರು ಯುನಾನ್‌ ಪ್ರಾಂತ್ಯದ ಸಾಮಾನ್ಯ ಕುಟುಂಬಕ್ಕೆ ಸೇರಿದವರು’ ಎಂದು ಅವರು ಕೆಲಸ ಮಾಡುತ್ತಿರುವ ವಿಶ್ವವಿದ್ಯಾಲಯವು ತಿಳಿಸಿದೆ.

‘ಚೀನಾದ ಯಾಂಗ್ ಲೀವೈ ಅವರು ಬಾಹ್ಯಾಕಾಶ ತಲುಪಿದ ಸುದ್ದಿಯನ್ನು 2003ರಲ್ಲಿ ಕ್ಯಾಂಪಸ್‌ ರೇಡಿಯೊದಲ್ಲಿ ಆಲಿಸಿದ್ದರು.  ಆ ನಂತರ ಗ್ಯೂ ಬಾಹ್ಯಾಕಾಶದತ್ತ ಆಕರ್ಷಿತರಾಗಿದ್ದರು’ ಎಂದು ವಿಶ್ವವಿದ್ಯಾಲಯವು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

ಬಾಹ್ಯಾಕಾಶ ಕ್ಷೇತ್ರದ ವಿಶ್ಲೇಷಕರಾಗಿರುವ ಚೆನ್‌ ಲ್ಯಾನ್‌ ಅವರು, ಈ ಹಿಂದೆ ತರಬೇತಿ ಪಡೆದ ಪೈಲಟ್‌ಗಳನ್ನು ಗಗನಯಾತ್ರಿಗಳಾಗಿ ಕಳುಹಿಸಲಾಗಿತ್ತು.ಈ ಮೂಲಕ ಚೀನಾ ಬಾಹ್ಯಾಕಾಶದ ಬಾಗಿಲನ್ನು ಸಾಮಾನ್ಯ ಜನರಿಗೂ ತೆರೆದಂತಾಗಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.