ADVERTISEMENT

ಕಾಶ್ಮೀರದ ‘ಏಕಪಕ್ಷೀಯ ಕ್ರಮಗಳನ್ನು’ ವಿರೋಧಿಸುತ್ತೇವೆ: ಪಾಕ್‌ಗೆ ಚೀನಾ ವಾಗ್ದಾನ

ಪಿಟಿಐ
Published 7 ಫೆಬ್ರುವರಿ 2022, 2:49 IST
Last Updated 7 ಫೆಬ್ರುವರಿ 2022, 2:49 IST
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್.: ರಾಯಿಟರ್ಸ್ ಚಿತ್ರ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್.: ರಾಯಿಟರ್ಸ್ ಚಿತ್ರ   

ಬೀಜಿಂಗ್: 60 ಬಿಲಿಯನ್ ಡಾಲರ್ ಸಿಪಿಇಸಿ ಹೂಡಿಕೆ ಕಾರ್ಯಕ್ರಮದ ಅಡಿಯಲ್ಲಿ ಚೀನಾ, ಪಾಕಿಸ್ತಾನದೊಂದಿಗೆ ನಿಕಟ ಸಹಕಾರದ ವಾಗ್ದಾನ ಮಾಡಿದೆ. ಕಾಶ್ಮೀರ ಸಮಸ್ಯೆಯನ್ನು ಸರಿಯಾಗಿ ಮತ್ತು ಶಾಂತಿಯುತವಾಗಿ ಪರಿಹರಿಸಲು ಕರೆ ನೀಡಿದೆ. ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಬಹುದಾದ ಯಾವುದೇ ‘ಏಕಪಕ್ಷೀಯ ಕ್ರಮಗಳನ್ನು’ವಿರೋಧಿಸುತ್ತದೆ ಎಂದು ಅದು ಹೇಳಿದೆ.

ನಾಲ್ಕು ದಿನಗಳ ಚೀನಾ ಪ್ರವಾಸದ ಕೊನೆಯ ದಿನವಾದ ಭಾನುವಾರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ನಿಧಾನಗತಿಯ ವೇಗ ಮತ್ತು ಚೀನಾದಲ್ಲಿ ಕೆಲಸ ಮಾಡುತ್ತಿರುವ ಚೀನಾದ ಸಿಬ್ಬಂದಿಗಳ ಮೇಲೆ ಪುನರಾವರ್ತಿತ ದಾಳಿಗಳ ಕುರಿತು ಹೆಚ್ಚುತ್ತಿರುವ ಕಳವಳಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚೆ ನಡೆದಿದೆ.

ಖಾನ್ ಅವರೊಂದಿಗಿನ ತಮ್ಮ ಸಭೆಯಲ್ಲಿ, ರಾಷ್ಟ್ರೀಯ ಸ್ವಾತಂತ್ರ್ಯ, ಸಾರ್ವಭೌಮತೆ, ಘನತೆ ರಕ್ಷಣೆ ಮತ್ತು ಭಯೋತ್ಪಾದನೆ ವಿರುದ್ಧ ಹೋರಾಡುವಲ್ಲಿ ಚೀನಾ, ಪಾಕಿಸ್ತಾನವನ್ನು ದೃಢವಾಗಿ ಬೆಂಬಲಿಸುತ್ತದೆ ಎಂದು ಕ್ಸಿ ಹೇಳಿದ್ದಾರೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.

ADVERTISEMENT

ಸಿಪಿಇಸಿಯ ಆಳವಾದ ಅಭಿವೃದ್ಧಿಯನ್ನು ಮುಂದಕ್ಕೆ ಕೊಂಡೊಯ್ಯಲು ಮತ್ತು ಪ್ರಮುಖ ಯೋಜನೆಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಪಾಕಿಸ್ತಾನದೊಂದಿಗೆ ಕೈಜೋಡಿಸಲು ಚೀನಾ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

‘ಶಾಂತಿಯುತ ಮತ್ತು ಸಮೃದ್ಧ ದಕ್ಷಿಣ ಏಷ್ಯಾವು ಎಲ್ಲಾ ದೇಶಗಳ ಸಾಮಾನ್ಯ ಹಿತಾಸಕ್ತಿಯಲ್ಲಿದೆ ಎಂದು ಎರಡೂ ದೇಶಗಳ ನಾಯಕರು ಪುನರುಚ್ಚರಿಸಿದ್ದಾರೆ’ಎಂದು ಜಂಟಿ ಹೇಳಿಕೆ ತಿಳಿಸಿದೆ.

'ಪ್ರಾದೇಶಿಕ ಸಹಕಾರವನ್ನು ಉತ್ತೇಜಿಸಲು ಮತ್ತು ಈ ಪ್ರದೇಶದಲ್ಲಿ ಶಾಶ್ವತವಾದ ಶಾಂತಿ, ಸ್ಥಿರತೆ ಮತ್ತು ಹಂಚಿಕೆಯ ಸಮೃದ್ಧಿಯ ಗುರಿಗಳನ್ನು ಮುನ್ನಡೆಸಲು ಮಾತುಕತೆ ಮತ್ತು ಎಲ್ಲಾ ವಿವಾದಗಳ ಪರಿಹಾರದ ಪ್ರಾಮುಖ್ಯತೆಯನ್ನು ಅವರು ಒತ್ತಿಹೇಳಿದರು’ಎಂದು ಅದು ಹೇಳಿದೆ.

‘ಪಾಕಿಸ್ತಾನದ ಕಡೆಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿಯ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚೀನಾಗೆ ವಿವರಿಸಲಾಯಿತು. ಅದರ ಕಳವಳಗಳು, ಸ್ಥಿತಿ ಮತ್ತು ಸದ್ಯದ ಪ್ರಮುಖ ಸಮಸ್ಯೆಗಳ ಬಗ್ಗೆ ಪಾಕಿಸ್ತಾನ ಮಾಹಿತಿ ನೀಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳ ಆಧಾರದ ಮೇಲೆ ಸರಿಯಾಗಿ ಮತ್ತು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು ಎಂದು ಚೀನಾ ಹೇಳಿದೆ. ಅದಮ್ಮು ಮೀರಿ ಪರಿಸ್ಥಿತಿಯನ್ನು ಸಂಕೀರ್ಣಗೊಳಿಸುವ ಯಾವುದೇ ಏಕಪಕ್ಷೀಯ ಕ್ರಮಗಳನ್ನು ಚೀನಾ ವಿರೋಧಿಸುತ್ತದೆ’ಎಂದು ಅದು ಹೇಳಿದೆ.

ಪಾಕಿಸ್ತಾನ ಮತ್ತು ಚೀನಾದ ಹಿಂದಿನ ಜಂಟಿ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಉಲ್ಲೇಖಗಳನ್ನು ಭಾರತ ಬಲವಾಗಿ ತಿರಸ್ಕರಿಸಿತ್ತು. ಜಮ್ಮು– ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಖ್ ತನ್ನ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಮತ್ತು ಮುಂದೆಯೂ ಇರುತ್ತದೆ ಎಂದು ಪ್ರತಿಪಾದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.