ಬೀಜಿಂಗ್: ‘ರಷ್ಯಾ – ಭಾರತ– ಚೀನಾ (ಆರ್‌ಐಸಿ) ತ್ರಿಪಕ್ಷೀಯ ಸಹಕಾರ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ರಷ್ಯಾ ಮುಂದಿಟ್ಟಿರುವ ಪ್ರಸ್ತಾವವನ್ನು ಚೀನಾ ಬೆಂಬಲಿಸಿದೆ’ ಎಂದು ರಷ್ಯಾದ ನ್ಯೂಸ್ ಪೋರ್ಟಲ್ ಇಜ್ವೆಸ್ಟಿಯ ವರದಿ ಮಾಡಿದೆ.
‘ಈ ತ್ರಿಪಕ್ಷೀಯ ಸಹಕಾರವು ಕೇವಲ ಮೂರು ದೇಶಗಳ ಹಿತಾಸಕ್ತಿ ಸಂರಕ್ಷಣೆಗೆ ಮಾತ್ರವಲ್ಲ, ಇದು ಇಡೀ ಜಗತ್ತಿನ ಮತ್ತು ಈ ವಲಯದ ಭದ್ರತೆ ಹಾಗೂ ಸ್ಥಿರತೆಯ ದೃಷ್ಟಿಯಿಂದಲೂ ಮಹತ್ವದ್ದು. ಈ ನಿಟ್ಟಿನಲ್ಲಿ ರಷ್ಯಾವು, ಚೀನಾ– ಭಾರತದೊಂದಿಗೆ ಮಾತುಕತೆ ನಡೆಸಲಿದ್ದು, ‘ಆರ್‌ಐಸಿ’ ಸಹಕಾರ ಪುನರಾರಂಭವನ್ನು ಎದುರು ನೋಡುತ್ತಿದೆ’ ಎಂದು ರಷ್ಯಾದ ಸಹಾಯಕ ವಿದೇಶಾಂಗ ಸಚಿವ ಆ್ಯಂಡ್ರಿ ರುದೆನ್ಕೊ ಹೇಳಿದ್ದಾರೆ.
‘ನಾವು ಭಾರತ ಮತ್ತು ಚೀನಾದ ನಿಯೋಗದೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ‘ಆರ್‌ಐಸಿ’ ನವೀಕರಣ ವಿಷಯ ಪ್ರಸ್ತಾಪವಾಗಿದೆ. ರಷ್ಯಾ ಕೂಡ ಈ ವಿಚಾರದಲ್ಲಿ ಪ್ರಾಮಾಣಿಕ ಆಸಕ್ತಿ ಹೊಂದಿದೆ. ನಾವು (ಆರ್‌ಐಸಿ) ‘ಬ್ರಿಕ್ಸ್’ ಸ್ಥಾಪಕ ದೇಶಗಳು ಎನ್ನುವುದರ ಜತೆಯಲ್ಲೇ, ಜಗತ್ತಿನ ಪ್ರಮುಖ ಪಾಲುದಾರ ದೇಶಗಳು ಎಂಬುದೂ ಗಮನೀಯ’ ಎಂದು ಆ್ಯಂಡ್ರಿ ರುದೆನ್ಕೊ ಅಭಿಪ್ರಾಯಪಟ್ಟಿದ್ದಾರೆ.
‘ಆರ್‌ಐಸಿ’ ಸಹಕಾರವು ಒಂದು ಹಂತಕ್ಕೆ ಬಂದ ನಂತರ, ನಾವು ‘ತ್ರಿಪಕ್ಷೀಯ ಸಹಕಾರ ವಿಧಾನ’ವೊಂದನ್ನು ರೂಪಿಸಲಿದ್ದೇವೆ’ ಎಂದು ರುದೆನ್ಕೊ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ವ್ಯವಹಾರಗಳ ವಕ್ತಾರ ಲಿನ್ ಜಿಯಾನ್, ‘ಭಾರತ–ಚೀನಾ– ರಷ್ಯಾ ಸಹಕಾರವು ಮೂರು ದೇಶಗಳ ಹಿತಾಸಕ್ತಿ ಸಂರಕ್ಷಣೆ ಮಾತ್ರವಲ್ಲ, ‘ಈ ವಲಯದ ಮತ್ತು ಇಡೀ ವಿಶ್ವದ ಶಾಂತಿ, ಭದ್ರತೆ, ಸ್ಥಿರತೆ ಮತ್ತು ಪ್ರಗತಿಯನ್ನೂ ಎತ್ತಿ ಹಿಡಿಯಲಿದೆ’ ಎಂದು ಹೇಳಿದ್ದಾರೆ.
ಇತ್ತೀಚೆಗೆ ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್ ತ್ರಿಪಕ್ಷೀಯ ಸಹಕಾರ ವೃದ್ಧಿಯ ಬಗ್ಗೆ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ರಷ್ಯಾ ‘ಆರ್‌ಐಸಿ’ ಪುನಶ್ಚೇತನ ಪ್ರಸ್ತಾವದೊಂದಿಗೆ ಮುಂದೆ ಬಂದಿದೆ.
2020ರಲ್ಲಿ ಪೂರ್ವ ಲಡಾಖ್‌ನಲ್ಲಿ ಭಾರತ–ಚೀನಾ ಸೇನಾ ಉದ್ವಿಗ್ನತೆ ತಲೆದೋರಿದಾಗ ಮತ್ತು ಕೊರೊನಾ ವೈರಸ್ ಸಂದರ್ಭದಲ್ಲಿ ‘ಆರ್‌ಐಸಿ’ ಸಹಕಾರವು ಸ್ಥಗಿತಗೊಂಡಿತ್ತು. ಈಗ ಮತ್ತೆ ಇದಕ್ಕೆ ಚಾಲನೆ ಲಭಿಸಲಿದೆ ಎಂದು ಸೆರ್ಗೆ ಲಾವ್ರೋವ್ ಹೇಳಿದ್ದಾರೆ.
ಲಡಾಖ್ ಉದ್ವಿಗ್ನತೆ ನಂತರ ಕಳೆದ ನಾಲ್ಕು ವರ್ಷಗಳಿಂದ ಭಾರತ–ಚೀನಾ ನಡುವಿನ ಸಂಬಂಧ ವಿಷಮಗೊಂಡಿತ್ತು. ಕಳೆದ ವರ್ಷ ಬ್ರಿಕ್ಸ್ ಶೃಂಗಸಭೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಮಾತುಕತೆ ನಡೆಸಿದ ನಂತರ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರಕ್ಕೆ ಪುನಶ್ಚೇತನ ಲಭಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.