ADVERTISEMENT

ದಲೈಲಾಮಾ ಉತ್ತರಾಧಿಕಾರಿ ಸಂಘರ್ಷ ವಿಚಾರ |ಭಾರತ ಎಚ್ಚರಿಕೆಯಿಂದ ಹೆಜ್ಜೆ ಇಡಲಿ: ಚೀನಾ

ಪಿಟಿಐ
Published 4 ಜುಲೈ 2025, 14:55 IST
Last Updated 4 ಜುಲೈ 2025, 14:55 IST
<div class="paragraphs"><p>,&nbsp;</p></div>

   

ಬೀಜಿಂಗ್‌: ಟಿಬೆಟ್‌ಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಭಾರತ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಚೀನಾ ಶುಕ್ರವಾರ ತಾಕೀತು ಮಾಡಿದೆ.

ಈ ಮೂಲಕ, ‘ದಲೈ ಲಾಮಾ ಅವರ ಅವತಾರವು ಸ್ಥಾಪಿತ ಆಚಾರದಂತೆ ಮತ್ತು ಅವರ ಇಚ್ಛೆಯ ಪ್ರಕಾರ ನಡೆಯಬೇಕು’ ಎಂದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಹೇಳಿಕೆಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.

ADVERTISEMENT

‘14ನೇ ದಲೈ ಲಾಮಾ ಅವರ ಚೀನಾ ವಿರೋಧಿ ಪ್ರತ್ಯೇಕತಾವಾದಿ ನಿಲುವುಗಳ ಬಗ್ಗೆ ಭಾರತ ಸ್ಪಷ್ಟತೆ ಹೊಂದಿರಬೇಕು. ಷಿ–ಜಂಗ್‌ (ಟಿಬೆಟ್‌) ಕುರಿತ ವಿಚಾರಗಳಲ್ಲಿ ಚೀನಾ ಬದ್ಧತೆಯನ್ನು ಭಾರತವು ಗೌರವಿಸಬೇಕು’ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವ ಮಾವೊ ನಿಂಗ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಟಿಬೆಟ್‌ ವಿಚಾರಗಳ ಕುರಿತ ಭಾರತದ ಮಾತು ಮತ್ತು ಕೃತಿಯಲ್ಲಿ ಎಚ್ಚರಿಕೆ ಇರಬೇಕು. ಚೀನಾ–ಟಿಬೆಟ್‌ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪವನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಅದು ಭಾರತ–ಚೀನಾ ದ್ವಿಪಕ್ಷೀಯ ಸಂಬಂಧದ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ’ ಎಂದು ಎಚ್ಚರಿಸಿದರು.

ಮುಂದಿನ ದಲೈ ಲಾಮಾ ಯಾರೆಂಬ ನಿರ್ಧಾರವನ್ನು ಸ್ಥಾಪಿತ ಸಂಸ್ಥೆ ಮತ್ತು ಟಿಬೆಟಿಯನ್ ಬೌದ್ಧ ನಾಯಕರು ತೆಗೆದುಕೊಳ್ಳುತ್ತಾರೆಯೇ ಹೊರತು, ಬೇರೆ ಯಾರಿಗೂ ಅದರ ಹಕ್ಕಿಲ್ಲ ಎಂದು  ಕಿರಣ್ ರಿಜಿಜು ಗುರುವಾರ ಪ್ರತಿಪಾದಿಸಿದ್ದರು.

‘ದಲೈ ಲಾಮಾ ಅವರೇ ನಿರ್ಧರಿಸಲಿ ಎಂಬುದು ಭಕ್ತರ ಇಂಗಿತ’
ಉತ್ತರಾಧಿಕಾರಿ ಯಾರಾಗಬೇಕು ಎಂದು ಟಿಬೆಟ್‌ನ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರೇ ನಿರ್ಧರಿಸಬೇಕು ಎಂಬುದು ಅವರ ಭಕ್ತರು ಮತ್ತು ಅನುಯಾಯಿಗಳ ಇಂಗಿತ ಎಂದು ಕಿರಣ್‌ ರಿಜಿಜು ಶುಕ್ರವಾರ ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ‘ನಾನು ಭಾರತ ಸರ್ಕಾರದ ಪರವಾಗಿ ಅಥವಾ ಚೀನಾದ ಅಭಿಪ್ರಾಯಕ್ಕೆ ಪ್ರತಿಯಾಗಿ ಈ ಹೇಳಿಕೆ ನೀಡುತ್ತಿಲ್ಲ’ ಎಂದು ಸ್ಪಷ್ಟನೆ ನೀಡಿದರು. ‘ದಲೈ ಲಾಮಾ ಅವರ ಅನುಯಾಯಿಯಾಗಿ ನಾನು ಈ ಮಾತನ್ನು ಹೇಳುತ್ತಿದ್ದೇನೆ’ ಎಂದರು. ‘ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ಗೊಂದಲದ ಅವಶ್ಯಕತೆ ಇಲ್ಲ. ದಲೈ ಲಾಮಾ ಅವರೇ ಈ ಬಗ್ಗೆ  ನಿರ್ಧಾರ ಕೈಗೊಳ್ಳಬೇಕು ಎಂಬುದು ಬೌದ್ಧ ಧರ್ಮದ  ಮತ್ತು ದಲೈ ಲಾಮಾ ಅವರ ಅನುಯಾಯಿಗಳ ಬಯಕೆ. ಈ ಬಗ್ಗೆ ಸರ್ಕಾರವಾಗಲೀ ನಾನಾಗಲೀ ಏನನ್ನೂ ಹೇಳುವ ಅಗತ್ಯ ಇಲ್ಲ’ ಎಂದು ಹೇಳಿದರು.
ಕಿರಣ್‌ ರಿಜಿಜು
ಸಂಸತ್‌ನಲ್ಲಿ ಭಾರತ–ಚೀನಾ ಬಂಧದ ಬಗ್ಗೆ ಚರ್ಚೆಯಾಗಲಿ: ಕಾಂಗ್ರೆಸ್‌
ಭಾರತ–ಚೀನಾ ಸಂಬಂಧದ ಬಗ್ಗೆ ಸಂಸತ್‌ನಲ್ಲಿ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಪ್ಪಿಗೆ ನೀಡಲಿ ಎಂದು ಕಾಂಗ್ರೆಸ್‌ ಶುಕ್ರವಾರ ಒತ್ತಾಯಿಸಿದೆ. ‘ಈ ಬಗ್ಗೆ ಚರ್ಚೆ ನಡೆದಲ್ಲಿ ಚೀನಾ ದೇಶವು ನೇರವಾಗಿ ಅಥವಾ ಪಾಕಿಸ್ತಾನದ ಮೂಲಕ ಭಾರತದ ಮೇಲೆ ಒಡ್ಡುತ್ತಿರುವ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಸವಾಲುಗಳ ಕುರಿತು ವ್ಯಕ್ತವಾಗುವ ಸಾಮೂಹಿಕ ಪ್ರತಿಕ್ರಿಯೆಗಳಲ್ಲಿ ಒಮ್ಮತ ಮೂಡಲು ಸಾಧ್ಯ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.