ADVERTISEMENT

‘ಭಾರತದ ತಪ್ಪು ಗ್ರಹಿಕೆ ನಿವಾರಿಸಲು ಸೂಚನೆ’

ಪಿಟಿಐ
Published 15 ಏಪ್ರಿಲ್ 2021, 20:53 IST
Last Updated 15 ಏಪ್ರಿಲ್ 2021, 20:53 IST

ಇಸ್ಲಾಮಾಬಾದ್‌: ಕುಲಭೂಷಣ್‌ ಜಾಧವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ನೀಡಿರುವ ತೀರ್ಪಿನ ಅನುಸಾರ ಮರು ವಿಚಾರಣೆ ನಡೆಸಲು ನ್ಯಾಯಾಲಯದ ವ್ಯಾಪ್ತಿಯ ಬಗ್ಗೆ ಭಾರತದ ತಪ್ಪು ಗ್ರಹಿಕೆಯನ್ನು ದೂರ ಮಾಡಬೇಕು ಎಂದು ಇಸ್ಲಾಮಾಬಾದ್‌ ಹೈಕೋರ್ಟ್‌ ಪಾಕಿಸ್ತಾನದ ವಿದೇಶಾಂಗ ಕಚೇರಿಗೆ ಗುರುವಾರ ಸೂಚನೆ ನೀಡಿದೆ.

ಬೇಹುಗಾರಿಕೆ ಪ್ರಕರಣದಲ್ಲಿ ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರಿಗೆ ಸೇನಾ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಭಾರತ ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ಈ ತೀರ್ಪನ್ನು ಮರುಪರಿಶೀಲನೆ ನಡೆಸುವಂತೆ ಅಂತರರಾಷ್ಟ್ರೀಯ ನ್ಯಾಯಾಲಯ ಆದೇಶಿಸಿತ್ತು.

ಐಸಿಜೆ ಆದೇಶದ ಮೇರೆಗೆ ಪಾಕಿಸ್ತಾನ ಸರ್ಕಾರ ಕಳೆದ ವರ್ಷ ವಿಶೇಷ ಸುಗ್ರೀವಾಜ್ಞೆ ಹೊರಡಿಸಿ ಪ್ರಕರಣದ ವಿಚಾರಣೆ ನಡೆಸಲು ಇಸ್ಲಾಮಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಿತ್ತು. ಆದರೆ, ಭಾರತವು ಇಸ್ಲಾಮಾಬಾದ್‌ ಹೈಕೋರ್ಟ್‌ ವ್ಯಾಪ್ತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಕೋರ್ಟ್‌ ವ್ಯಾಪ್ತಿಯ ಬಗ್ಗೆ ಭಾರತ ಹೊಂದಿರುವ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಲು ಯತ್ನಿಸಬೇಕು ಎಂದು ಇಸ್ಲಾಮಾಬಾದ್‌ ಹೈಕೋರ್ಟ್‌ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.