ADVERTISEMENT

ಕೋವಿಡ್‌ 19 ಸಾಂಕ್ರಾಮಿಕ ಮೂಲ ಪತ್ತೆಗೆ ಬದ್ಧ: ಡಬ್ಲ್ಯುಎಚ್‌ಒ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2023, 14:12 IST
Last Updated 12 ಮಾರ್ಚ್ 2023, 14:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಿನೀವಾ (ರಾಯಿಟರ್ಸ್‌): ಕೋವಿಡ್‌ 19 ಸಾಂಕ್ರಾಮಿಕದ ಮೂಲವನ್ನು ಶೋಧಿಸುವುದು ನೈತಿಕವಾಗಿ ಮತ್ತು ವೈಜ್ಞಾನಿಕವಾಗಿ ಅತ್ಯಗತ್ಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಬಲವಾಗಿ ಪ್ರತಿಪಾದಿಸಿದೆ.

ವಿಶ್ವ ವ್ಯಾಪಿಸಿದ ಕೋವಿಡ್‌ 19 ಸೋಂಕನ್ನು ವಿಶ್ವ ಆರೋಗ್ಯ ಸಂಸ್ಥೆಯು ಮೂರು ವರ್ಷಗಳ ಹಿಂದೆ ಇದೊಂದು ಜಾಗತಿಕ ‘ಸಾಂಕ್ರಾಮಿಕ’ ರೋಗ ಎಂದು ಘೋಷಿಸಿದ್ದನ್ನು ಉಲ್ಲೇಖಿಸಿ ಭಾನುವಾರ ಟ್ವೀಟ್‌ ಮಾಡಿರುವ ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೋಮ್ ಘೆಬ್ರೆಯಿಸೆಸ್, ‘ಕೊರೊನಾ ಸೋಂಕಿನ ಸೃಷ್ಟಿಯ ಪತ್ತೆಗೆ ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದ್ದಾರೆ.

‘ಸೋಂಕಿನ ಮೂಲದ ಪತ್ತೆ ಮತ್ತು ಇದಕ್ಕೆ ಸಂಬಂಧಿಸಿದ ಎಲ್ಲ ವೈಜ್ಞಾನಿಕ ಸಿದ್ಧಾಂತಗಳ ಅನ್ವೇಷಣೆ ಬಾಕಿಯಿವೆ. ಸಾಂಕ್ರಾಮಿಕಕ್ಕೆ ಬಲಿಯಾದ ಲಕ್ಷಾಂತರ ಜನರು ಮತ್ತು ಸುದೀರ್ಘಕಾಲ ಕೋವಿಡ್‌ನೊಂದಿಗೆ ಬದುಕಬೇಕಾದವರ ಸಲುವಾಗಿ ಹಾಗೂ ಭವಿಷ್ಯದಲ್ಲಿ ಇದರ ಏಕಾಏಕಿ ಸ್ಫೋಟ ತಡೆಗಾಗಿ ವೈರಸ್‌ನ ಮೂಲದ ಅನ್ವೇಷಣೆ ವೈಜ್ಞಾನಿಕ ಮತ್ತು ನೈತಿಕವಾಗಿ ಆಗಲೇಬೇಕು’ ಎಂದಿದ್ದಾರೆ.

ADVERTISEMENT

ಈ ಸಾಂಕ್ರಾಮಿಕಕ್ಕೆ ಕಾರಣವಾದ ವೈರಾಣು ಚೀನಾ ಪ್ರಯೋಗಾಲಯದಿಂದ ಆಕಸ್ಮಿಕವಾಗಿ ಸೋರಿಕೆಯಾಗಿರಬಹುದು ಎಂಬ ವರದಿಯನ್ನು ಅಮೆರಿಕದ ‘ವಾಲ್ ಸ್ಟ್ರೀಟ್ ಜರ್ನಲ್’ ಪ್ರಕಟಿಸಿತ್ತು. ಇದಕ್ಕೆ ಉತ್ತರಿಸಬೇಕಾದ ಒತ್ತಡ ಸಹವಾಗಿಯೇ ಡಬ್ಲ್ಯುಎಚ್‌ಒ ಮೇಲೆ ಉಂಟಾಗಿದೆ. ಆದರೆ, ಮಾಧ್ಯಮ ವರದಿಯನ್ನು ಬೀಜಿಂಗ್ ತಳ್ಳಿಹಾಕಿದೆ.

ಕೋವಿಡ್‌ ಲಸಿಕೆಯ ಅಸಾಮಾನ್ಯ ಹಂಚಿಕೆಯನ್ನು ತಡೆದಿದ್ದರೆ ಕನಿಷ್ಠ 13 ಲಕ್ಷ ಜನರ ಸಾವು ತಪ್ಪಿಸಬಹುದಿತ್ತು. ಇದು ಪುನರಾವರ್ತನೆ ಆಗಬಾರದು ಎಂದು ಒತ್ತಾಯಿಸಿ, ಸಾಮಾಜಿಕ ಕಾರ್ಯಕರ್ತರು, ರಾಜಕಾರಣಿಗಳು ಮತ್ತು ತಜ್ಞರು ಕಳೆದ ವಾರಾಂತ್ಯದಲ್ಲಿ ಡಬ್ಲ್ಯುಎಚ್‌ಒಗೆ ಮುಕ್ತ ಪತ್ರ ಬರೆದಿದ್ದರು.

ವೈರಾಣು ಸೋರಿಕೆಯ ಶಂಕಿತ ಪ್ರಯೋಗಾಲಯವಿರುವ ಮತ್ತು ಮನುಷ್ಯರಲ್ಲಿ ಕಾಣಿಸಿದ ಮೊದಲ ಕೋವಿಡ್‌ 19 ಪ್ರಕರಣ ವರದಿಯಾದ ‌‌ವುಹಾನ್‌ ಪ್ರದೇಶಕ್ಕೆ ಡಬ್ಲ್ಯುಎಚ್‌ಒ ನೇತೃತ್ವದ ತಜ್ಞರ ತಂಡವು 2021ರಲ್ಲಿ ಭೇಟಿ ನೀಡಿತ್ತು. ಕೆಲವು ವಾರಗಳ ಪರಿಶೀಲನೆಯ ನಂತರ, ಡಬ್ಲ್ಯುಎಚ್‌ಒ ಮತ್ತು ಚೀನಾದ ತಜ್ಞರ ತಂಡ ನೀಡಿದ್ದ ಜಂಟಿ ವರದಿಯಲ್ಲಿ ‘ವೈರಸ್‌ ಬಾವಲಿಗಳ ಮೂಲಕ ಮನುಷ್ಯರಿಗೆ ಇನ್ನೊಂದು ಪ್ರಾಣಿಯಿಂದ ಹರಡಿರಬಹುದು. ಆದರೆ, ಈ ಕುರಿತು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ’ ಎಂದು ಹೇಳಿತ್ತು. ಆದರೆ ಚೀನಾ, ಈ ಕುರಿತು ಮತ್ತಷ್ಟು ಭೇಟಿಗಳ ಅಗತ್ಯವಿಲ್ಲ ಎಂದು ವಾದಿಸಿತ್ತು.

ಅಂದಿನಿಂದ ಡಬ್ಲ್ಯುಎಚ್‌ಒ, ಅಪಾಯಕಾರಿ ರೋಗಕಾರಕಗಳ ಬಗ್ಗೆ ವೈಜ್ಞಾನಿಕ ಸಲಹಾ ಗುಂಪು ರಚಿಸಿದೆ. ಆದರೆ, ಕೋವಿಡ್‌ 19 ಸಾಂಕ್ರಾಮಿಕ ರೋಗವು ಹೇಗೆ ಸೃಷ್ಟಿಯಾಯಿತೆನ್ನುವ ಬಗ್ಗೆ ಇನ್ನೂ ಯಾವುದೇ ತೀರ್ಮಾನಕ್ಕೆ ಅದು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.