ADVERTISEMENT

ಗಾಜಾ | ಇಂಟರ್‌ನೆಟ್‌, ಮೊಬೈಲ್‌ ಸಂಪರ್ಕ ನಿರ್ಬಂಧ

ಏಜೆನ್ಸೀಸ್
Published 16 ಡಿಸೆಂಬರ್ 2023, 16:07 IST
Last Updated 16 ಡಿಸೆಂಬರ್ 2023, 16:07 IST
<div class="paragraphs"><p>ಗಾಜಾ</p></div>

ಗಾಜಾ

   

ರಫಾ (ಗಾಜಾ ಪಟ್ಟಿ): ಇಸ್ರೇಲ್‌ ಸೇನೆ ಮುತ್ತಿಗೆ ಹಾಕಿರುವ ಗಾಜಾ ಪಟ್ಟಿಯಲ್ಲಿ ಮೊಬೈಲ್‌ ಮತ್ತು ಇಂಟರ್‌ನೆಟ್‌ ಸಂಪರ್ಕವನ್ನು ದೀರ್ಘಾವಧಿಗೆ ನಿರ್ಬಂಧಿಸಿರುವುದರಿಂದ ಯುದ್ಧಪೀಡಿತ ಪ್ರದೇಶದಲ್ಲಿ ಜನರ ಪರಿಸ್ಥಿತಿ ಶನಿವಾರ ಮತ್ತಷ್ಟು ಬಿಗಡಾಯಿಸುವಂತೆ ಮಾಡಿತು.

ಯುದ್ಧಪೀಡಿತ ಗಾಜಾ ಪಟ್ಟಿಯಲ್ಲಿ ಪರಿಹಾರ ಕಾರ್ಯಕ್ಕೆ ಅಡ್ಡಿಯಾಗಿದ್ದು, ಆಹಾರ ಪದಾರ್ಥಗಳು ಸಿಗದೆ ಜನರು ಹಸಿವಿನಿಂದ ಬಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಲಾರಂಭಿಸಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ADVERTISEMENT

ದಕ್ಷಿಣದಲ್ಲಿ ದೂರಸಂಪರ್ಕ ಜಾಲದ ಮಾರ್ಗಗಳಿಗೆ ಹಾನಿಯಾದ ಕಾರಣ ಗಾಜಾದಲ್ಲಿ ಸಂವಹನಕ್ಕೆ ತೀವ್ರ ಅಡಚಣೆಯಾಗಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ವಿಭಾಗ ಹೇಳಿದೆ.

ಇಂಟರ್‌ನೆಟ್‌ ಮತ್ತು ದೂರವಾಣಿ ಸಂಪರ್ಕಗಳು ಗುರುವಾರ ಸಂಜೆಯೇ ಸ್ಥಗಿತಗೊಂಡವು. ಶನಿವಾರ ಬೆಳಿಗ್ಗೆಯಾದರೂ ಅವು ಸಕ್ರಿಯಗೊಳ್ಳಲಿಲ್ಲ ಎಂದು ಇಂಟರ್‌ನೆಟ್‌ ಬಳಕೆದಾರರು ಹೇಳಿದ್ದಾರೆ. 

ಯುದ್ಧ ಆರಂಭದಿಂದ ಈವರೆಗೆ ಇಂಟರ್‌ನೆಟ್‌ ಸಂಪರ್ಕವನ್ನು ಇಷ್ಟೊಂದು ದೀರ್ಘಾವಧಿಗೆ ನಿರ್ಬಂಧಿಸಿರುವುದು ಇದೇ ಮೊದಲು ಎಂದು ಸ್ಥಳೀಯರು ದೂರಿದ್ದಾರೆ.

ಧ್ವಂಸಗೊಂಡ ಗಾಜಾ ನಗರ ಮತ್ತು ನಗರ ಸಮೀಪದ ನಿರಾಶ್ರಿತರ ಜಬಾಲಿಯಾ ಶಿಬಿರದ ಮೇಲೆ ಇಸ್ರೇಲ್‌ ಪಡೆಗಳು ಶುಕ್ರವಾರ ರಾತ್ರಿಯಿಂದ ಶನಿವಾರವೂ ಬಾಂಬ್‌ ದಾಳಿ ನಡೆಸಿವೆ. ಟ್ಯಾಂಕರ್‌ಗಳಿಂದ ಶೆಲ್‌ ದಾಳಿ ನಡೆದ ಹಾಗೂ ಗುಂಡಿನ ಚಕಮಕಿಯ ಶಬ್ದ ಕೇಳಿಸಿತು ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ತಪ್ಪು ಗ್ರಹಿಕೆ– ಮೂವರು ಒತ್ತೆಯಾಳುಗಳ ಹತ್ಯೆ

ಭೂ ದಾಳಿಯ ವೇಳೆ ತಪ್ಪು ಗ್ರಹಿಕೆಯಿಂದ ಮೂವರು ಇಸ್ರೇಲಿ ಒತ್ತೆಯಾಳುಗಳ ಮೇಲೆ ಶುಕ್ರವಾರ ಯೋಧರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಇಸ್ರೇಲ್‌ ಸೇನೆಯ ಪ್ರಧಾನ ವಕ್ತಾರ ರಿಯರ್‌ ಆಡಮ್‌ ಡೇನಿಯಲ್‌ ಹಗಾರಿ ತಿಳಿಸಿದ್ದಾರೆ.

ಇತ್ತೀಚೆಗೆ ಇಸ್ರೇಲ್‌ ಸೈನಿಕರು ಮತ್ತು ಹಮಾಸ್ ಬಂಡುಕೋರರ ನಡುವೆ ತೀವ್ರ ಹೋರಾಟ ನಡೆಯುತ್ತಿರುವ ಗಾಜಾ ನಗರದ ಶಿಜೈಯಾಹ್‌ ಪ್ರದೇಶದಲ್ಲಿ ಇಸ್ರೇಲಿ ಪಡೆಗಳು ತಪ್ಪಾಗಿ ಮೂವರು ಇಸ್ರೇಲಿ ಒತ್ತೆಯಾಳುಗಳ ಮೇಲೆ ಗುಂಡು ಹಾರಿಸಿದರು. ಮೃತಪಟ್ಟ ಮೂವರಲ್ಲಿ 20 ವರ್ಷದ ಒಬ್ಬ ಯುವಕ ಸೇರಿದ್ದಾನೆ ಎಂದು ಅವರು ಹೇಳಿದ್ದಾರೆ. 

ಇದೇ ವೇಳೆ ನೂರಾರು ಮಂದಿ ಇಸ್ರೇಲ್‌ ನಾಗರಿಕರು, ಒತ್ತೆಯಾಳುಗಳ ಸುರಕ್ಷಿತ ವಾಪಸಾತಿಗೆ ಒತ್ತಾಯಿಸಿ ಟೆಲ್‌ ಅವಿವ್‌ನಲ್ಲಿ ಪ್ರಮುಖ ಹೆದ್ದಾರಿಯಲ್ಲಿ ಸಂಚಾರ ತಡೆದು, ಪ್ರತಿಭಟನೆ ನಡೆಸಿದರು.

ಪ್ಯಾಲೆಸ್ಟೀನ್‌ ಪತ್ರಕರ್ತ ಸಾವು

ಇಸ್ರೇಲ್‌ ಸೇನೆ ನಡೆಸಿದ ವೈಮಾನಿಕ ಮತ್ತು ಡ್ರೋನ್‌ ದಾಳಿಯಲ್ಲಿ ಪ್ಯಾಲೆಸ್ಟೀನ್‌ನ ಒಬ್ಬ ಪತ್ರಕರ್ತರು ಸತ್ತಿದ್ದು, ಮತ್ತೊಬ್ಬ ಪತ್ರಕರ್ತ ಗಾಯಗೊಂಡಿದ್ದಾರೆ. ಈ ಇಬ್ಬರೂ ಅಲ್‌ ಜಝಿರಾ ಟೆಲಿವಿಷನ್‌ ನೆಟ್‌ವರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.