ADVERTISEMENT

ಅಮೆರಿಕದಲ್ಲಿ ಗಾಂಧೀಜಿ ಪ್ರತಿಮೆಗೆ ಹಾನಿ: ಎಫ್‌ಬಿಐ ತನಿಖೆಗೆ ಆಗ್ರಹ

ಪಿಟಿಐ
Published 3 ಫೆಬ್ರುವರಿ 2021, 6:44 IST
Last Updated 3 ಫೆಬ್ರುವರಿ 2021, 6:44 IST
ರಾಜಾ ಕೃಷ್ಣಮೂರ್ತಿ
ರಾಜಾ ಕೃಷ್ಣಮೂರ್ತಿ   

ವಾಷಿಂಗ್ಟನ್‌: ಕ್ಯಾಲಿಫೋರ್ನಿಯಾದಲ್ಲಿ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ಹಾನಿಗೊಳಿಸಿರುವ ಪ್ರಕರಣವನ್ನು ಎಫ್‌ಬಿಐ ತನಿಖೆಗೆ ಹಸ್ತಾಂತರಿಸಬೇಕು ಎಂದು ಭಾರತೀಯ ಮೂಲದ ಅಮೆರಿಕನ್‌ ಸಂಸದರು ಮಂಗಳವಾರ ಒತ್ತಾಯಿಸಿದ್ದಾರೆ.

ಕಳೆದ ವಾರ ಅಪರಿಚಿತ ವ್ಯಕ್ತಿಗಳು ಡೇವಿಸ್‌ನ ಸೆಂಟ್ರಲ್‌ ಪಾರ್ಕ್‌ನಲ್ಲಿದ್ದ ಮಹಾತ್ಮ ಗಾಂಧೀಜಿ ಅವರ ಕಂಚಿನ ಪ್ರತಿಮೆಗೆ ಹಾನಿ ಉಂಟು ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ನಗರ ಪೊಲೀಸರು, ತನಿಖೆಯನ್ನು ಆರಂಭಿಸಿದ್ದಾರೆ.

‘ನಾನು ಈ ದುರುದ್ದೇಶಪೂರಿತ ಕೃತ್ಯವನ್ನು ಖಂಡಿಸುತ್ತೇನೆ. ಭಾರತೀಯ ಅಮೆರಿಕನ್ನರನ್ನು ಬೆದರಿಸುವ ಉದ್ದೇಶದಿಂದ ಈ ಕೃತ್ಯವೆಸಗಲಾಗಿದೆ. ಈ ಪ್ರಕರಣವನ್ನು ಎಫ್‌ಬಿಐ ತನಿಖೆಗೆ ನೀಡಬೇಕು’ ಎಂದು ಸಂಸದರಾಜಾ ಕೃಷ್ಣಮೂರ್ತಿ ಅವರು ಆಗ್ರಹಿಸಿದ್ದಾರೆ.

ADVERTISEMENT

'ವಿಶ್ವಕ್ಕೆ ಶಾಂತಿ ಮತ್ತು ಅಹಿಂಸೆಯ ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡಿದ ಗಾಂಧೀಜಿ ಅವರ ಪ್ರತಿಮೆಗೆ ಹಾನಿಯನ್ನುಂಟು ಮಾಡಲಾಗಿದೆ’ ಎಂದು ಅವರು ಹೇಳಿದರು.

ಈ ಕೃತ್ಯವನ್ನು ಖಂಡಿಸಿರುವ ಸಂಸದ ಅಮಿ ಬೆರಾ ಅವರು,‘ಡಾ.ಮಾರ್ಟಿನ್‌ ಲೂಥರ್‌ ಕಿಂಗ್‌ ಜೂನಿಯರ್‌ ಮತ್ತು ಮಹಾತ್ಮ ಗಾಂಧೀಜಿಯವರಂತಹ ನಾಯಕರು, ಶಾಂತಿ ಮತ್ತು ಅಹಿಂಸಾ ಮಾರ್ಗದ ಮೂಲಕ ಪ್ರತಿಭಟನೆ ನಡೆಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದರು’ ಎಂದರು.

‘ವೈವಿಧ್ಯತೆಯೇ ನಮ್ಮ ದೇಶದ ಶಕ್ತಿ. ಏನೇ ಮನಸ್ತಾಪಗಳಿದ್ದರೂ ಅದನ್ನು ಶಾಂತಿಯುತವಾಗಿ, ಅಹಿಂಸಾ ಮಾರ್ಗದಲ್ಲಿ ಬಗೆಹರಿಸಬೇಕು. ಈ ರೀತಿ ಆಸ್ತಿಗಳಿಗೆ ಹಾನಿಯನ್ನುಂಟು ಮಾಡುವುದು ಸರಿಯಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.