ADVERTISEMENT

ಭಾರತದ ಕೋವಿಡ್‌ ಲಸಿಕೆಯ ಬಗ್ಗೆ ವಿಶ್ವಾಸವಿದೆ: ವಿಶ್ವ ಆರೋಗ್ಯ ಸಂಸ್ಥೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಅಕ್ಟೋಬರ್ 2021, 7:03 IST
Last Updated 29 ಅಕ್ಟೋಬರ್ 2021, 7:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ವಿಶ್ವಸಂಸ್ಥೆ: ಉತ್ತಮ ಗುಣಮಟ್ಟದ ಕೋವಿಡ್‌ ಲಸಿಕೆಗಳನ್ನು ತಯಾರಿಸುತ್ತಿರುವ ಭಾರತೀಯ ಉದ್ಯಮದಲ್ಲಿ ನಮಗೆ ವಿಶ್ವಾಸವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಈ ಕುರಿತು ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು, 'ಕೋವಾಕ್ಸಿನ್ ತಯಾರಕ ಸಂಸ್ಥೆಯಾದ 'ಭಾರತ್ ಬಯೋಟೆಕ್' ಡಬ್ಲ್ಯುಎಚ್‌ಒಗೆ ನಿಯಮಿತವಾಗಿ ಮತ್ತು ತ್ವರಿತವಾಗಿ ಮಾಹಿತಿಗಳನ್ನು ಸಲ್ಲಿಸುತ್ತಿದೆ. ಉತ್ತಮ ಗುಣಮಟ್ಟದ ಕೋವಿಡ್‌ ಲಸಿಕೆಗಳನ್ನು ತಯಾರಿಸುತ್ತಿರುವ ಭಾರತೀಯ ಉದ್ಯಮದಲ್ಲಿ ನಮಗೆ ವಿಶ್ವಾಸವಿದೆ' ಎಂದು ತಿಳಿಸಿದ್ದಾರೆ.

ಲಸಿಕೆಯ ತುರ್ತು ಬಳಕೆಗೆ ಮಾನ್ಯತೆ ನೀಡಲು ಹೈದರಾಬಾದ್‌ ಮೂಲದ 'ಭಾರತ್ ಬಯೊಟೆಕ್‌' ಸಂಸ್ಥೆಯು ಡಬ್ಲ್ಯೂಎಚ್‌ಒ ದತ್ತಾಂಶಗಳನ್ನು ಒದಗಿಸಿತ್ತು.

ADVERTISEMENT

'ತಾಂತ್ರಿಕ ಸಲಹಾ ಸಮಿತಿ ಉತ್ಪಾದಕ ಸಂಸ್ಥೆಯಿಂದ ಹೆಚ್ಚುವರಿ ಸ್ಪಷ್ಟನೆ ಪಡೆಯಲು ನಿರ್ಧರಿಸಿದೆ. ವಾರಾಂತ್ಯದ ವೇಳೆಗೆ ವಿವರ ಸಿಗಬಹುದು. ನ.3ರಂದು ಮತ್ತೆ ಸಮಿತಿ ಸಭೆ ಸೇರಲಿದೆ‘ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.

ಲಸಿಕೆಯ ತುರ್ತು ಬಳಕೆಗೆ ಮಾನ್ಯತೆ ನೀಡುವ ಬಗ್ಗೆ ಪ್ರತಿಕ್ರಿಯಿಸಿರುವ ಡಬ್ಲ್ಯುಎಚ್‌ಒದ ಔಷಧಿ ಮತ್ತು ಆರೋಗ್ಯ ಉತ್ಪನ್ನಗಳ ವಿಭಾಗದ ಸಹಾಯಕ ಮಹಾನಿರ್ದೇಶಕಿ ಡಾ. ಮರಿಯಾಂಜಿಲಾ ಸಿಮಾವೊ ಕೋವಾಕ್ಸಿನ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ತಾಂತ್ರಿಕ ತಜ್ಞರ ತಂಡಕ್ಕೆ ಸಲ್ಲಿಸಲು ಹೆಚ್ಚುವರಿ ಮಾಹಿತಿ ಬೇಕಾಗಿದೆ. ಭಾರತ್ ಬಯೋಟೆಕ್‌ನೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಈ ಕುರಿತು ದೈನಂದಿನ ಸಂಭಾಷಣೆ ಮತ್ತು ಸಭೆಗಳು ನಡೆಯುತ್ತಿವೆ' ಎಂದು ಸಿಮಾವೊ ಹೇಳಿದ್ದಾರೆ.

'ನಾವು ನಿಜವಾಗಿಯೂ ಭಾರತೀಯ ಉದ್ಯಮವನ್ನು ನಂಬುತ್ತೇವೆ. ಭಾರತವು ವಿವಿಧ ಲಸಿಕೆಗಳನ್ನು ಉತ್ಪಾದಿಸುತ್ತದೆ. ಅವುಗಳು ಉತ್ತಮ ಗುಣಮಟ್ಟದ ಲಸಿಕೆಗಳಾಗಿವೆ. ನಾವೀಗ ಭಾರತದ ಕೋವಿಡ್‌ ಲಸಿಕೆಯ ಮೌಲ್ಯಮಾಪನದ ಕೊನೆಯ ಹಂತದಲ್ಲಿದ್ದೇವೆ. ಮುಂದಿನ ವಾರ ಅನುಮತಿ ಸಿಗಬಹುದು' ಎಂದು ಸಿಮಾವೊ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.