ADVERTISEMENT

ಹಾಂಗ್‌ಕಾಂಗ್‌ ಪ್ರತಿಭಟನೆಗೆ ‘ಕೋವಿಡ್‌’ ವಿರಾಮ

ಏಜೆನ್ಸೀಸ್
Published 25 ಫೆಬ್ರುವರಿ 2020, 20:00 IST
Last Updated 25 ಫೆಬ್ರುವರಿ 2020, 20:00 IST
ಜಪಾನ್‌ನ ಕಡಲ ತೀರದಲ್ಲಿ ನಿಂತಿರುವ ಡೈಮಂಡ್‌ ಪ್ರಿನ್ಸೆಸ್‌ ಹಡಗು     – ರಾಯಿಟರ್ಸ್‌ ಚಿತ್ರ
ಜಪಾನ್‌ನ ಕಡಲ ತೀರದಲ್ಲಿ ನಿಂತಿರುವ ಡೈಮಂಡ್‌ ಪ್ರಿನ್ಸೆಸ್‌ ಹಡಗು     – ರಾಯಿಟರ್ಸ್‌ ಚಿತ್ರ   

ಹಾಂಗ್‌ಕಾಂಗ್‌: ಕೋವಿಡ್‌ ಸೋಂಕು ಚೀನಾದಲ್ಲಿ ಭಾರಿ ಆತಂಕವನ್ನು ಸೃಷ್ಟಿಸಿದ್ದರೂ ಸರ್ಕಾರದ ಒಂದು ತಲೆನೋವಿಗೆ ಈ ಸೋಂಕು ತಾತ್ಕಾಲಿಕ ಔಷಧವಾಗಿ ಪರಿಣಮಿಸಿದೆ.

ಚೀನಾ ಸರ್ಕಾರದ ನೀತಿಯನ್ನು ಖಂಡಿಸಿ ಹಲವು ತಿಂಗಳುಗಳಿಂದ ಪ್ರತಿಭಟನೆಗಳನ್ನು ನಡೆಸುತ್ತಿದ್ದ ಹಾಂಗ್‌ಕಾಂಗ್‌ನ ನಾಗರಿಕರು, ಸೋಂಕಿನ ಭೀತಿಯಿಂದ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದಾರೆ. ಆದರೆ, ‘ಇದು ತಾತ್ಕಾಲಿಕ ಹಿನ್ನಡೆ, ಪ್ರತಿಭಟನೆ ಕೊನೆಗೊಂಡಿದ್ದರೂ ಕ್ರೋಧದ ಬಿಸಿ ಇನ್ನೂ ಆರಿಲ್ಲ’ ಎಂದು ನಾಗರಿಕರು ಹೇಳುತ್ತಿದ್ದಾರೆ.

‘ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದ ನಮ್ಮಲ್ಲಿ ಅನೇಕರಿಗೆ ಒಂದಿಷ್ಟು ವಿರಾಮ ಬೇಕಾಗಿತ್ತು. ಈಗ ಅದು ಲಭಿಸಿದೆ. ನಾನು ಎಷ್ಟೊಂದು ಬಳಲಿದ್ದೆ ಎಂಬುದು ಈ ವಿರಾಮದಿಂದಾಗಿ ನನಗೆ ಅರ್ಥವಾಗಿದೆ. ಆದರೆ ಹೋರಾಟದ ಕಿಚ್ಚು ಇನ್ನೂ ಕಡಿಮೆಯಾಗಿಲ್ಲ. ಬೀದಿಗಿಳಿದು ಮತ್ತೆ ಹೋರಾಟ ಆರಂಭಿಸುವ ತವಕದಲ್ಲಿದ್ದೇನೆ’ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದ, ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ವಿದ್ಯಾರ್ಥಿ ಮನೆಯಲ್ಲಿ ಓದು, ವಿಡಿಯೊಗೇಮ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

ಸತತ ಹೋರಾಟದಿಂದಾಗಿ ಕಾರ್ಯಕರ್ತರು ಬಳಲಿದ್ದರು. ಹೋರಾಟದ ನೇತೃತ್ವ ವಹಿಸಿದ್ದ ನೂರಾರು ಜನರನ್ನು ಚೀನಾ ಸರ್ಕಾರ ಬಂಧಿಸಿತ್ತು. ಇದೇ ಸಂದರ್ಭದಲ್ಲಿ ಕೋವಿಡ್‌ ಆತಂಕವೂ ಸೃಷ್ಟಿಯಾಗಿದ್ದರಿಂದ ಪ್ರತಿಭಟನಕಾರರು ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡಲು ತೀರ್ಮಾನಿಸಿದ್ದರು. ಏಳು ತಿಂಗಳು ನಿರಂತರವಾಗಿ ನಡೆದಿದ್ದ ಹೋರಾಟಕ್ಕೆ ತೆರೆ ಬಿದ್ದಿರುವುದು ಚೀನಾದ ಆಡಳಿತಕ್ಕೆ ಸಮಾಧಾನವನ್ನು ನೀಡಿದೆ.

80 ಸಾವಿರ ಮಂದಿಗೆ ಸೋಂಕು

ಬೀಜಿಂಗ್‌ (ಎಪಿ): ಚೀನಾದಲ್ಲಿ ‘ಕೋವಿಡ್‌–19’ (ಕೊರೊನಾ ವೈರಸ್‌) ಸೋಂಕಿಗೆ ಬಲಿಯಾದವರ ಸಂಖ್ಯೆ 2,663ಕ್ಕೆ ಏರಿದ್ದು, ಜಗತ್ತಿನಾದ್ಯಂತ 80,000ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ದಾಖಲೆಗಳು ಹೇಳಿವೆ. ತಮ್ಮ ದೇಶದಲ್ಲಿ ಸೋಂಕಿಗೆ ಒಳಗಾದವರು ಹಾಗೂ ಸೋಂಕಿನಿಂದಾಗಿ ಪ್ರಾಣ ಬಿಟ್ಟವರ ಸಂಖ್ಯೆಯನ್ನು ಆಯಾ ಸರ್ಕಾರಗಳು ವಿಶ್ವ ಆರೋಗ್ಯ ಸಂಸ್ಥೆಗೆ ನೀಡಿವೆ. ಲೆಬನಾನ್‌, ಬೆಲ್ಜಿಯಂ, ನೇಪಾಳ, ಶ್ರೀಲಂಕಾ, ಸ್ವೀಡನ್‌, ಕಾಂಬೋಡಿಯಾ, ಫಿನ್ಲೆಂಡ್‌, ಈಜಿಪ್ಟ್‌ ಹಾಗೂ ಅಫ್ಗಾನಿಸ್ತಾನದಲ್ಲಿ ತಲಾ ಒಬ್ಬರಲ್ಲಿ ಸೋಂಕು ಕಾಣಿಸಿದೆ. ಈ ದೇಶಗಳಲ್ಲಿ ಯಾರೂ ಸತ್ತಿರುವ ಬಗ್ಗೆ ವರದಿಯಾಗಿಲ್ಲ.

ಭಾರತೀಯರನ್ನು ಕರೆತರಲು ಕ್ರಮ

ಟೋಕಿಯೊ (ಪಿಟಿಐ): ‘ಜಪಾನ್‌ ಸಮೀಪ ಸಮುದ್ರದಲ್ಲಿ ತಡೆಹಿಡಿಯಲಾಗಿರುವ ಡೈಮಂಡ್‌ ಪ್ರಿನ್ಸೆಸ್‌ ಹಡಗಿನಲ್ಲಿರುವ, ಕೋವಿಡ್‌–19 ಸೋಂಕಿಗೆ ಒಳಗಾಗದಿರುವ ಭಾರತೀಯರನ್ನು ಕರೆತರಲು ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಭಾರತೀಯ ದೂತಾವಾಸದ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಡಗಿನಲ್ಲಿದ್ದ 3,711 ಮಂದಿಯಲ್ಲಿ 138 ಮಂದಿ ಭಾರತೀಯರು. ಅವರಲ್ಲಿ 14 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಇವರೆಲ್ಲರೂ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ವರದಿಯಾಗಿದೆ. ‘ಸೋಂಕು ತಗುಲಿಲ್ಲದ ಭಾರತೀಯರನ್ನು ಕರೆತರಲು ವ್ಯವಸ್ಥೆ ಮಾಡಲಾಗುತ್ತಿದೆ. ಹಡಗಿನಲ್ಲಿರುವ ಭಾರತೀಯರಿಗೆ ಇ–ಮೇಲ್‌ನಲ್ಲಿ ಮಾಹಿತಿ ನೀಡಲಾಗಿದೆ’ ಎಂದು ಅಧಿಕಾರಿಗಳು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.