ADVERTISEMENT

ಕೋವಿಡ್‌: ವರ್ಷದ ನಂತರ ಹೃದಯದ ಸಮಸ್ಯೆ ಹೆಚ್ಚಿಸುತ್ತದೆ–ಅಧ್ಯಯನ

ಪಿಟಿಐ
Published 8 ಫೆಬ್ರುವರಿ 2022, 13:23 IST
Last Updated 8 ಫೆಬ್ರುವರಿ 2022, 13:23 IST
ಕೋವಿಡ್‌
ಕೋವಿಡ್‌   

ವಾಷಿಂಗ್ಟನ್‌: ಕೊರೊನಾ ಸೋಂಕಿಗೆ ಒಳಗಾದವರಿಗೆ ಒಂದು ತಿಂಗಳಿನಿಂದ ಒಂದು ವರ್ಷದ ಅವಧಿಯಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು ಎಂದು ಅಮೆರಿಕದಲ್ಲಿ ನಡೆಸಿದ ಅಧ್ಯಯನವೊಂದು ಹೇಳಿದೆ.

‘ನೇಚರ್‌ ಮೆಡಿಸನ್‌’ ಪತ್ರಿಕೆಯಲ್ಲಿ ಈ ಅಧ್ಯಯನದ ವರದಿ ಪ್ರಕಟವಾಗಿದೆ. ಸೋಂಕಿಗೆ ಒಳಗಾದವರಿಗೆ ಹೃದಯ ಬಡಿತದಲ್ಲಿ ಏರುಪೇರು, ಹೃದಯದ ಉರಿಯೂತ, ರಕ್ತ ಹೆಪ್ಪುಗಟ್ಟುವಿಕೆ, ಪಾರ್ಶ್ವವಾಯು, ಹೃದಯಾಘಾತ, ಹೃದಯ ವೈಫಲ್ಯ ಅಥವಾ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಸಂಶೋಧನಾ ಅಧ್ಯಯನ ಮಾಹಿತಿ ನೀಡಿದೆ.

‘ಮೊದಲು ಆರೋಗ್ಯವಾಗಿದ್ದವರು ಮತ್ತು ಸೌಮ್ಯ ಕೊರೊನಾ ಲಕ್ಷಣಗಳಿದ್ದವರಿಗೂ ಈ ಸಮಸ್ಯೆಗಳು ಉಂಟಾಗುತ್ತವೆ. ಕೋವಿಡ್‌ನಿಂದ ಗಂಭೀರ ಹೃದಯದ ಸಮಸ್ಯೆಗಳು ಉಂಟಾಗಬಹುದು. ಇದು ಸಾವಿಗೂ ಕಾರಣವಾಗಬಹುದು’ ಎಂದು ಅಮೆರಿಕದಲ್ಲಿ ವಾಷಿಂಗ್ಟನ್‌ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಅಧ್ಯಯನದ ಹಿರಿಯ ಲೇಖಕ ಜಿಯಾದ್‌ ಅಲ್‌–ಅಲಿ ಹೇಳಿದರು.

ADVERTISEMENT

‘ಒಂದು ಬಾರಿ ಹೃದಯದ ಸಮಸ್ಯೆಗಳು ಕಾಣಿಸಿಕೊಂಡರೆ ಸುಲಭದಲ್ಲಿ ಅವು ಪರಿಹಾರವಾಗುವುದಿಲ್ಲ. ಜೀವನಪೂರ್ತಿ ಆ ಸಮಸ್ಯೆಗಳು ಕಾಡುತ್ತವೆ’ ಎಂದು ಅವರು ಹೇಳಿದರು.

ಕೋವಿಡ್‌ ಇಡೀ ಜಗತ್ತಿನಲ್ಲಿ ಇದುವರೆಗೆ 1.5 ಕೋಟಿ ಜನರಿಗೆ ಹೃದಯದ ತೊಂದರೆ ಉಂಟಾಗಲು ಕಾರಣವಾಗಿದೆ ಎಂದು ಅಧ್ಯಯನ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.