ADVERTISEMENT

Covid-19 World Update| ಸೋಂಕಿತರ ಚಿಕಿತ್ಸೆಗೆ ದಕ್ಷಿಣ ಆಫ್ರಿಕಾ ಪರದಾಟ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 17:08 IST
Last Updated 10 ಜುಲೈ 2020, 17:08 IST
ದಕ್ಷಿಣ ಆಫ್ರಿಕಾದ ಸ್ಟರ್ಕ್ಸ್‌ಪ್ರೂಟ್‌ನಲ್ಲಿ ಮಾಸ್ಕ್‌ ಧರಿಸಿ ತರಗತಿಗಳಿಗೆ ಹೋಗುತ್ತಿರುವ ವಿದ್ಯಾರ್ಥಿಗಳು
ದಕ್ಷಿಣ ಆಫ್ರಿಕಾದ ಸ್ಟರ್ಕ್ಸ್‌ಪ್ರೂಟ್‌ನಲ್ಲಿ ಮಾಸ್ಕ್‌ ಧರಿಸಿ ತರಗತಿಗಳಿಗೆ ಹೋಗುತ್ತಿರುವ ವಿದ್ಯಾರ್ಥಿಗಳು    

ಜಾನ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ಇತ್ತೀಚಿನ ಮಾಹಿತಿ ಪ್ರಕಾರ ವಿಶ್ವಾದಾದ್ಯಂತ 1.2 ಕೋಟಿ (1,23,23,502) ಜನರಿಗೆ ಜನರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದ್ದು, 5,55,486 ಮಂದಿ ಮಹಾಮಾರಿಗೆ ಪ್ರಾಣ ತೆತ್ತಿದ್ದಾರೆ. ಈ ವರೆಗೆ 67 ಲಕ್ಷಕ್ಕೂ ಅಧಿಕ ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ವಿಶ್ವದಲ್ಲಿ ಅತಿಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕವೊಂದರಲ್ಲೇ 31,31,953 ಸೋಂಕಿತರಿದ್ದು, 1,33,420 ಮಂದಿ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ಅಲ್ಲಿ 65,551 ಪ‍್ರಕರಣಗಳು ವರದಿಯಾಗಿರುವುದು ಆತಂಕ ಮೂಡಿಸಿದೆ.

ಇನ್ನೊಂದೆಡೆ ಲ್ಯಾಟಿನ್‌ ಅಮೆರಿಕ ರಾಷ್ಟ್ರಗಳಲ್ಲಿ ಕೋವಿಡ್‌ ಹಾಟ್‌ಸ್ಪಾಟ್‌ ಎಂದು ಗುರುತಿಸಿಕೊಂಡಿರುವ ಬ್ರೆಜಿಲ್‌ ನಲ್ಲಿ 17,55,779 ಪ್ರಕರಣಗಳಿವೆ. ಇಲ್ಲಿ 69,184 ಕೋವಿಡ್ ಸಂಬಂಧಿತ ಸಾವುಗಳನ್ನು ವರದಿಯಾಗಿವೆ.

ADVERTISEMENT

ಆಕ್ಸಿಜನ್‌ಗೆ ದಕ್ಷಿಣ ಆಫ್ರಿಕಾ ಪರದಾಟ

‌ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್‌–19 ಈಗ ದಕ್ಷಿಣ ಆಫ್ರಿಕಾದಲ್ಲೂ ತಲ್ಲಣ ಮೂಡಿಸುತ್ತಿದೆ. ಆಫ್ರಿಕಾ ದೇಶಗಳ ಪೈಕಿ ಹೊಸ ಹಾಟ್‌ಸ್ಪಾಟ್‌ ಆಗಿ ಗುರುತಿಸಿಕೊಂಡಿರುವ ದಕ್ಷಿಣ ಆಫ್ರಿಕಾದಲ್ಲಿ ರೋಗಿಗಳಿಗೆ ಸೂಕ್ತ ರೀತಿಯ ವೈದ್ಯಕೀಯ ಸೇವೆಗಳು ಲಭ್ಯವಾಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆ ಕಾಡುತ್ತಿದೆ. ಹೀಗಾಗಿ ರೋಗಿಗಳು ಪರದಾಡುತ್ತಿದ್ದಾರೆ. ಈ ಮಧ್ಯೆ ಕಳೆದ 24 ಗಂಟೆಗಳಲ್ಲಿ ಅಲ್ಲಿ 13,674 ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 2,38,339ಕ್ಕೆ ಏರಿದೆ.

ಸಿಂಗಪುರದಲ್ಲಿ ಕೋವಿಡ್‌ ನಡುವೇ ಚುನಾವಣೆ

ಫೇಸ್ ಮಾಸ್ಕ್ ಮತ್ತು ಕೈಗವಸುಗಳನ್ನು ಧರಿಸಿದ ಸಿಂಗಾಪುರದ ಜನ ಶುಕ್ರವಾರ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿದರು. ಈ ಬಾರಿಯೂ ಆಡಳಿತಾರೂಢ ಪಕ್ಷವೇ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ. ಆದರೆ, ಈ ಬಾರಿಯ ಅಧಿಕಾರವು ಪ್ರಧಾನಿ ಲೀ ಹ್ಸೀನ್ ಲೂಂಗ್ ಅವರಿಗೆ ಅಗ್ನಿ ಪರೀಕ್ಷೆಯಾಗಿರಲಿದೆ. ಕುಸಿದಿರುವ ಆರ್ಥಿಕತೆಯನ್ನು ನಿಭಾಯಿಸುವುದು ಅವರ ಮುಂದಿರುವ ಮೊದಲ ಅಗ್ನಿ ಪರೀಕ್ಷೆಯಾಗಿದೆ. ಸದ್ಯ ಸಿಂಗಪುರದಲ್ಲಿ 45,614 ಮಂದಿಗೆ ಕೋವಿಡ್ ಸೋಂಕು ತಗುಲಿದೆ. 26 ಮಂದಿ ಮೃತಪಟ್ಟಿದ್ದಾರೆ.

ಅತಿ ಹೆಚ್ಚು ಕೋವಿಡ್‌ ಪ್ರಕರಣಗಳನ್ನು ಹೊಂದಿರುವ ವಿಶ್ವದ ಅಗ್ರ 5 ರಾಷ್ಟ್ರಗಳು

  1. ಅಮೆರಿಕ–3,131,953
  2. ಬ್ರೆಜಿಲ್‌–1,755,779
  3. ಭಾರತ–7,93,802
  4. ರಷ್ಯಾ–7,12,863
  5. ಪೆರು– 3,16,448

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.