ADVERTISEMENT

ಕೋವಿಡ್: 2 ತಿಂಗಳು ಕೋಮಾದಲ್ಲಿದ್ದ ಭಾರತೀಯ ಮೂಲದ ವೈದ್ಯೆ ಪವಾಡಸದೃಶ ರೀತಿ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 21 ಮೇ 2021, 2:35 IST
Last Updated 21 ಮೇ 2021, 2:35 IST
ಪ್ರಾತಿನಿಧಿಕ: ಎಎಫ್‌ಪಿ ಚಿತ್ರ
ಪ್ರಾತಿನಿಧಿಕ: ಎಎಫ್‌ಪಿ ಚಿತ್ರ   

ಲಂಡನ್: ‌ಕೋವಿಡ್ ಸೋಂಕಿತ ಭಾರತೀಯ ಮೂಲದ ಬ್ರಿಟನ್‌ನಲ್ಲಿರುವ ವೈದ್ಯೆಯೊಬ್ಬರು ಎರಡು ತಿಂಗಳ ಕೋಮಾ ಬಳಿಕ ಪವಾಡ ಸದೃಶ ರೀತಿಯಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ತನ್ನ ಸ್ಥಿತಿ ಗಂಭೀರವಾಗುತ್ತಿದ್ದ ಬಗ್ಗೆ ಅರಿತಿದ್ದ ವೈದ್ಯೆ ಬಹುತೇಕ ತನ್ನ ಕುಟುಂಬಕ್ಕೆ ಗುಡ್ ಬೈ ಹೇಳಿದ್ದರು. ಎಕ್ಸ್ಟ್ರಾ ಕಾರ್ಪೋರಲ್ ಮೆಂಬ್ರೇನ್ ಆಕ್ಸಿಜೀಕರಣ ಯಂತ್ರದಲ್ಲಿದ್ದೇನೆ. 35 ದಿನ ಇದನ್ನು ವೈದ್ಯಕೀಯವಾಗಿ ಕೊನೆಯ ಪ್ರಯತ್ನವೆಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದರು. ಆದರೆ, ವಿಧಿ ನಿಶ್ಚಯವೇ ಬೇರೆ ಆಗಿತ್ತು. ವೈದ್ಯೆ ಚೇತರಿಕೆ ಕಂಡು ಬದುಕುಳಿದಿದ್ದಾರೆ.

‘ನನ್ನ ಕುಟುಂಬವು ನಿಜಕ್ಕೂ ಅದ್ಭುತ. ನನ್ನ ಮಗಳು, ನನ್ನ ಪತಿ ಪ್ರತಿ ಹಂತದಲ್ಲೂ ನನ್ನ ಜೊತೆಗಿದ್ದರು’ ಎಂದು ಕೋಮಾದಿಂದ ಹೊರಬಂದ ಡಾ.ಅನುಷಾ ಗುಪ್ತಾ ಎನ್‌ಡಿಟಿವಿಗೆ ತಿಳಿಸಿದ್ದಾರೆ. ಕೋಮಾದಿಂದ ಹೊರಬಂದ ಬಳಿಕ ಅನುಷಾ ನಿಂತು ನಡೆಯುವುದನ್ನು ಮತ್ತೆ ಅಭ್ಯಾಸ ಮಾಡಬೇಕಾಯಿತು. ಬ್ರಿಟನ್ನಿನ ಐದು ಇಸಿಎಂಒ ಕೇಂದ್ರಗಳಲ್ಲಿ ಒಂದಾದ ಮ್ಯಾಂಚೆಸ್ಟರ್‌ ಆಸ್ಪತ್ರೆಯಲ್ಲಿ ಅವರು 150 ದಿನಗಳನ್ನು ಕಳೆದಿದ್ದಾರೆ.

ADVERTISEMENT

ಕೋವಿಡ್‌ಗೆ ತುತ್ತಾಗಿದ್ದ ಕುಟುಂಬ ವೈದ್ಯರಾದ ಡಾ. ಗುಪ್ತಾ ಅವರ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟಿತ್ತು. ಆಮ್ಲಜನಕದ ಪ್ರಮಾಣವು ಶೇಕಡಾ 80 ಕ್ಕಿಂತ ಕಡಿಮೆಯಾಗಿತ್ತು.

‘ನಾನು ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದೆ ಮತ್ತು ನನ್ನ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟಿತು. ಐಸಿಯು ಕನ್ಸಲ್ಟೆಂಟ್ ನನ್ನನ್ನು ವಾರ್ಡ್‌ನಲ್ಲಿ ನೋಡಲು ಬಂದರು. ನನಗೆ ವೆಂಟಿಲೇಟರ್ ಅಗತ್ಯವಿದೆ ಎಂದು ಹೇಳಿದರು. ಆಗ ನಾನು ನನ್ನ ಗಂಡನಿಗೆ ವಾಟ್ಸ್ಆ್ಯಪ್ ಕರೆ ಮಾಡಿ, 18 ತಿಂಗಳ ಮಗಳನ್ನು ನೋಡಿಕೊಳ್ಳಲು ತಿಳಿಸಿದೆ. ವೆಂಟಿಲೇಟರ್ ಅಳವಡಿಕೆ ಬಳಿಕ ನನ್ನನ್ನು ಕೆಲ ದಿನಗಳಲ್ಲಿ ಇಸಿಎಂಒಗೆ ಶಿಫ್ಟ್ ಮಾಡಿದರು’ ಎಂದು ಅನುಷಾ ಹೇಳಿದ್ದಾರೆ.

ಇಸಿಎಂಒ ಒಂದು ಉತ್ತಮ ರೀತಿಯ ಜೀವ ಬೆಂಬಲ ವ್ಯವಸ್ಥೆಯಾಗಿದ್ದು, ರೋಗಿಯ ಶ್ವಾಸಕೋಶವು ವಿಶ್ರಾಂತಿ ಮತ್ತು ಗುಣವಾಗುತ್ಗಿದ್ದಾಗ ಇದು ಒಂದು ಜೋಡಿ ಶ್ವಾಸಕೋಶದಂತೆ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಕೋವಿಡ್ ಎರಡನೇ ಅಲೆಯಿಂದ ಹೆಣಗಾಡುತ್ತಿರುವ ರೋಗಿಗಳು ಮತ್ತು ಕುಟುಂಬಗಳಿಗೆ ಏನು ಹೇಳಲು ಬಯಸುತ್ತೀರಾ? ಎಂದು ಕೇಳಿದ್ದಕ್ಕೆ, ‘ಬ್ರಿಟನ್ನಿನಲ್ಲಿ ಕೋವಿಡ್ ಸೋಂಕಿನ ಪ್ರಮಾಣ ತಗ್ಗಿಸುವಲ್ಲಿ ಸಹಕಾರಿಯಾದ ಒಂದು ವಿಷಯವೆಂದರೆ ಕಠಿಣ ಲಾಕ್‌ಡೌನ್. ಅದರ ಜೊತೆಗೆ ದೈಹಿಕ ಅಂತರ ಮತ್ತು ಲಸಿಕಾ ಕಾರ್ಯಕ್ರಮಗಳು ನೆರವಾದವು’. ಅದನ್ನೇ ಇಲ್ಲಿಯೂ ಪಾಲಿಸುವಂತೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.