ADVERTISEMENT

ಅಮೆರಿಕ ಕಾಳ್ಗಿಚ್ಚು: ಸಾವಿನ ಸಂಖ್ಯೆ 30ಕ್ಕೆ ಏರಿಕೆ; 10ಕ್ಕೂ ಹೆಚ್ಚು ಜನ ನಾಪತ್ತೆ

ಏಜೆನ್ಸೀಸ್
Published 13 ಸೆಪ್ಟೆಂಬರ್ 2020, 4:23 IST
Last Updated 13 ಸೆಪ್ಟೆಂಬರ್ 2020, 4:23 IST
   

ವಾಷಿಂಗ್ಟನ್‌: ಅಮೆರಿಕದ ಪೂರ್ವ ಕರಾವಳಿ ಭಾಗದಲ್ಲಿ ಉಂಟಾಗಿರುವ ಕಾಳ್ಗಿಚ್ಚಿನ ಜ್ವಾಲೆಯಿಂದಾಗಿ30 ಮಂದಿ ಮೃತಪಟ್ಟಿದ್ದು, ಹತ್ತಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಎನ್‌ಬಿಸಿ ವರದಿ ಮಾಡಿದೆ.

‘ಸಮಯಕ್ಕೆ ಸರಿಯಾಗಿ ಎಚ್ಚರಿಕೆಯ ಸಂದೇಶ ಪಡೆಯದ ಮತ್ತು ಸುರಕ್ಷಿತ ಸ್ಥಳಗಳಿಗೆ ತೆರಳಲು ಸಾಧ್ಯವಾಗದ ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ’ ಎಂದಿರುವ ಒರೆಗಾನ್‌ ತುರ್ತು ಸ್ಥಿತಿ ನಿರ್ವಹಣಾ ನಿರ್ದೇಶಕ ಆ್ಯಂಡ್ರೋ ಫೆಲ್ಫ್ಸ್‌‌ ಅವರು, ಇದೊಂದು ‘ಸಾಮೂಹಿಕ ಮಾರಣಾಂತಿಕ ದುರಂತ’ ಎಂದು ಎಚ್ಚರಿಸಿದ್ದಾರೆ.

ಕಾಳ್ಗಿಚ್ಚಿನಿಂದಾಗಿ ಕ್ಯಾಲಿಫೋರ್ನಿಯಾ, ಒರೆಗಾನ್‌ ಮತ್ತು ವಾಷಿಂಗ್ಟನ್‌ ಭಾಗದ ಸುಮಾರು ಹತ್ತು ಸಾವಿರ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಎನ್‌ಬಿಸಿ ಶನಿವಾರ ವರದಿ ಮಾಡಿತ್ತು. ಇದುವರೆಗೆ ಒರೆಗಾನ್‌ನಲ್ಲಿ 8 ಮಂದಿ, ವಾಷಿಂಗ್ಟನ್‌ನಲ್ಲಿ ಒಂದು ವರ್ಷದ ಮಗು ಮೃತಪಟ್ಟಿದೆ. ಕ್ಯಾಲಿಫೋರ್ನಿಯಾ ಅರಣ್ಯ ಮತ್ತು ಅಗ್ನಿಶಾಮಕಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಈ ಭಾಗದಲ್ಲಿ ಸುಮಾರು 19 ಮಂದಿ ಮೃತಪಟ್ಟಿದ್ದಾರೆ.

ADVERTISEMENT

‘ಕ್ಯಾಲಿಫೋರ್ನಿಯಾದ ಸುಮಾರು 28 ಭಾಗಗಳಲ್ಲಿ ಹಬ್ಬಿರುವ ಕಾಳ್ಗಿಚ್ಚನ್ನು ನಿಯಂತ್ರಿಸಲು ಅಗ್ನಿಶಾಮಕ ಇಲಾಖೆಯ16,000 ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಈ ವರ್ಷ ಆರಂಭದಿಂದ ಈ ಭಾಗದಲ್ಲಿ ಸುಮಾರು 32 ಲಕ್ಷ ಎಕರೆಯಷ್ಟು ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಇದು ಅಮೆರಿಕದ ಕನೆಕ್ಟಿಕಟ್‌ ರಾಜ್ಯಕ್ಕಿಂತಲೂ ದೊಡ್ಡ ಪ್ರದೇಶವಾಗಿದೆ’ ಎಂದು ತಿಳಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸೋಮವಾರ ಕ್ಯಾಲಿಫೋರ್ನಿಯಾಗೆ ಭೇಟಿ ನೀಡಲಿದ್ದು, ಪರಿಸ್ಥಿತಿಯ ಅವಲೋಕನ ನಡೆಸಲಿದ್ದಾರೆ ಎಂದು ಶ್ವೇತಭವನದ ಮಾಧ್ಯಮ ಉಪಕಾರ್ಯದರ್ಶಿ ಜುದ್ ದೀರೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.