ADVERTISEMENT

80 ಕೋಟಿ ಜನರಿಗೆ ಭಾರತ ಆಹಾರ ಭದ್ರತೆ ನೀಡುತ್ತಿದೆ: ಜೈಶಂಕರ್

ಮ್ಯೂನಿಚ್: ಅಮೆರಿಕ ಸಂಸದೆ ಎಲಿಸಾ ಟೀಕೆಗೆ ಜೈಶಂಕರ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2025, 14:08 IST
Last Updated 15 ಫೆಬ್ರುವರಿ 2025, 14:08 IST
ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆಯುತ್ತಿರುವ ‘ಮ್ಯೂನಿಚ್‌ ಭದ್ರತಾ ಸಮಾವೇಶ’ದ ಅಂಗವಾಗಿ ಆಯೋಜಿಸಿದ್ದ ಸಂವಾದದಲ್ಲಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮಾತನಾಡಿದರು  –ಪಿಟಿಐ ಚಿತ್ರ 
ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆಯುತ್ತಿರುವ ‘ಮ್ಯೂನಿಚ್‌ ಭದ್ರತಾ ಸಮಾವೇಶ’ದ ಅಂಗವಾಗಿ ಆಯೋಜಿಸಿದ್ದ ಸಂವಾದದಲ್ಲಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮಾತನಾಡಿದರು  –ಪಿಟಿಐ ಚಿತ್ರ     

ಮ್ಯೂನಿಚ್: ‘ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಇದ್ದು, ಇದು 80 ಕೋಟಿ ಜನರಿಗೆ ಆಹಾರ ಭದ್ರತೆ ಒದಗಿಸುತ್ತಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಶನಿವಾರ ಹೇಳಿದ್ದಾರೆ.

ಇಲ್ಲಿ ನಡೆಯುತ್ತಿರುವ ‘ಮ್ಯೂನಿಚ್‌ ಭದ್ರತಾ ಸಮಾವೇಶ’ದಲ್ಲಿ ಸಂವಾದವೊಂದರಲ್ಲಿ ಅವರು ಈ ಮಾತು ಹೇಳಿದ್ದಾರೆ.

ಇದಕ್ಕೂ ಮುನ್ನ, ‘ಪ್ರಜಾಪ್ರಭುತ್ವ ವ್ಯವಸ್ಥೆಯು ಜನರ ಮೂಲಭೂತ ಅಗತ್ಯಗಳನ್ನು ಪೂರೈಸುವುದಿಲ್ಲ’ ಎಂದು ಹೇಳಿದ್ದ ಅಮೆರಿಕ ಸಂಸದೆ ಎಲಿಸಾ ಸ್ಲಾಟ್‌ಕಿನ್‌ ಅವರಿಗೆ ಜೈಶಂಕರ್‌ ತಿರುಗೇಟು ನೀಡಿದ್ದಾರೆ.

ADVERTISEMENT

‘ಸಂಸದರೇ, ಪ್ರಜಾಪ್ರಭುತ್ವವು ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದಿಲ್ಲ ಎಂದು ಹೇಳಿದ್ದೀರಿ. ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ 80 ಕೋಟಿ ಜನರಿಗೆ ಆಹಾರ ಒದಗಿಸಲಾಗುತ್ತಿದೆ’ ಎಂದು ಜೈಶಂಕರ್‌ ಹೇಳಿದರು.

‘ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಭಿನ್ನವಾದ ಚರ್ಚೆ, ಸಂವಾದಗಳು ನಡೆಯುತ್ತಿರುತ್ತವೆ. ಬೇರೆ ಬೇರೆ ಅಭಿಪ್ರಾಯಗಳೂ ಇವೆ. ಹೀಗಾಗಿ, ನಿಮ್ಮ ಅಭಿಪ್ರಾಯವೇ ಸಾರ್ವತ್ರಿಕ ಎಂಬುದಾಗಿ ಭಾವಿಸಬೇಡಿ’ ಎಂದೂ ಹೇಳಿದ್ದಾರೆ. 

‘ನುಡಿದಂತೆ ನಡೆಯಿರಿ’: ‘ಪ್ರಜಾತಾಂತ್ರಿಕ ಮೌಲ್ಯಗಳ ಕುರಿತು ಇತರ ದೇಶಗಳಿಗೆ ಮಾಡುವ ಉಪದೇಶ ಮಾಡುವ ಪಾಶ್ಚಿಮಾತ್ಯ ರಾಷ್ಟ್ರಗಳು ಅದರಂತೆ ನಡೆದುಕೊಳ್ಳಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

‘ವಿಶ್ವದ ಇತರ ಅನೇಕ ರಾಷ್ಟ್ರಗಳಲ್ಲಿ ಯಶಸ್ವಿ ಪ್ರಜಾಪ್ರಭುತ್ವ ಮಾದರಿಗಳಿವೆ. ಹೀಗಾಗಿ, ಅಂತಿಮವಾಗಿ ಪ್ರಜಾತಂತ್ರ ವ್ಯವಸ್ಥೆಯೇ ಇರಬೇಕು ಎಂದು ನೀವು ಬಯಸುವುದಾದಲ್ಲಿ ಇಂತಹ ಯಶಸ್ವಿ ಮಾದರಿಗಳನ್ನು ಅನುಸರಿಸಿ’ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.