ADVERTISEMENT

ಭಾರತದ ಮೇಲೆ ನಿರ್ಬಂಧ: ಇನ್ನೂ ನಿರ್ಧಾರವಿಲ್ಲ

ರಷ್ಯಾದಿಂದ ರಕ್ಷಣಾ ವ್ಯವಸ್ಥೆ ಖರೀದಿ: ಅಮೆರಿಕದಿಂದ ಭಾರತದ ಮನವೊಲಿಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2018, 13:37 IST
Last Updated 11 ಸೆಪ್ಟೆಂಬರ್ 2018, 13:37 IST

ವಾಷಿಂಗ್ಟನ್ (ಪಿಟಿಐ): ರಷ್ಯಾದಿಂದ ಸುಮಾರು ₹33 ಸಾವಿರ ಕೋಟಿ ಮೊತ್ತದ (4.5 ಬಿಲಿಯನ್ ಯುಎಸ್‌ಡಿ) ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಖರೀದಿಗೆ ಮುಂದಾಗಿರುವ ಭಾರತದ ಮೇಲೆ ನಿರ್ಬಂಧ ಹೇರುವ ಬಗ್ಗೆ ಸದ್ಯ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಷ್ಯಾದ ‘ಎಸ್–400 ಟ್ರೈಂಫ್ ಕ್ಷಿಪಣಿ ವಾಯು ರಕ್ಷಣಾ ವ್ಯವಸ್ಥೆ’ ಖರೀದಿ ಮಾಡದಂತೆ ಭಾರತದ ಮನವೊಲಿಸಲು ಅಮೆರಿಕ ಯತ್ನಿಸುತ್ತಿದೆ. ಒಂದು ವೇಳೆ ಭಾರತ ಖರೀದಿಗೆ ಮುಂದಾದರೆ, ‘ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿ ಮೇಲೆ ನಿರ್ಬಂಧ’ ಹೇರುವ ಅಮೆರಿಕದ ಸಿಎಎಟಿಎಸ್‌ಎ ಕಾಯ್ದೆಯನ್ನು ಉಲ್ಲಂಘಿಸಿದಂತಾಗುತ್ತದೆ. ಆದರೆ ನಿರ್ಬಂಧ ಸಡಿಲಿಸುವ ಅಧಿಕಾರವನ್ನು ಅಮೆರಿಕ ಅಧ್ಯಕ್ಷರಿಗೆ ಸಂಸತ್ತು ನೀಡಿದೆ.

ರಕ್ಷಣಾ ಖರೀದಿ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮೆರಿಕ ವಿದೇಶಾಂಗ ಇಲಾಖೆಯ ಉಪಸಹಾಯಕ ಕಾರ್ಯದರ್ಶಿ ಅಲೈಸ್ ವೆಲ್ ಅವರು, ‘ಪ್ರಸ್ತುತ ಇರುವ ಅಮೆರಿಕದ ನಿರ್ಬಂಧಗಳು ಭಾರತದಂತಹ ದೇಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.