ADVERTISEMENT

ಅಫ್ಗಾನಿಸ್ತಾನದ ವಿಶ್ವಸಂಸ್ಥೆ ಸಿಬ್ಬಂದಿಯ ಸುರಕ್ಷತೆ ನಮ್ಮ ಆದ್ಯತೆ: ಗುಟೆರಸ್‌

ಪಿಟಿಐ
Published 25 ಆಗಸ್ಟ್ 2021, 6:52 IST
Last Updated 25 ಆಗಸ್ಟ್ 2021, 6:52 IST
ಆಂಟೋನಿಯೊ ಗುಟೆರಸ್‌
ಆಂಟೋನಿಯೊ ಗುಟೆರಸ್‌   

ವಿಶ್ವಸಂಸ್ಥೆ: ಅಫ್ಗಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ಸಿಬ್ಬಂದಿ ಅನುಭವಿಸುತ್ತಿರುವ ಸಂಕಟ, ನೋವುಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್‌, ‘ನಮ್ಮ ಶಕ್ತ್ಯಾನುಸಾರ ಅಲ್ಲಿರುವ ಸಿಬ್ಬಂದಿಯ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುತ್ತೇವೆ‘ ಎಂದು ಭರವಸೆ ನೀಡಿದ್ದಾರೆ.

ಅಫ್ಗಾನಿಸ್ತಾನದಲ್ಲಿರುವ ವಿಶ್ವಸಂಸ್ಥೆಯ ಸಿಬ್ಬಂದಿಗೆ ಮಂಗಳವಾರ ಕಳುಹಿಸಿರುವ ವಿಡಿಯೊ ಸಂದೇಶದಲ್ಲಿ ‘ನಾವು ನಿಮ್ಮೊಂದಿಗಿದ್ದೇವೆ. ನಮ್ಮ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದೆ‘ ಎಂದು ತಿಳಿಸಿದ್ದಾರೆ.

‘ಇಂಥ ಬಿಕ್ಕಟ್ಟಿನ ಸಂದರ್ಭದಲ್ಲೂ ಅಫ್ಗನ್‌ ಜನರನ್ನು ಬೆಂಬಲಿಸುತ್ತಿರುವ ನಿಮ್ಮೆಲ್ಲರಿಗೂ ವೈಯಕ್ತಿಕವಾಗಿ ವಿಶ್ವಸಂಸ್ಥೆಯ ಕುಟುಂಬದ ಪರವಾಗಿ ಧನ್ಯವಾದಗಳನ್ನು ಹೇಳುತ್ತಿದ್ದೇನೆ. ನೀವು ಅಫ್ಗನ್‌ ಸಹೋದ್ಯೋಗಿಗಳಿಗಾಗಿ ಸಲ್ಲಿಸುತ್ತಿರುವ ಸೇವೆಗೆ ನಾವು ಕೃತಜ್ಞರಾಗಿದ್ದೇವೆ. ಇಂಥ ಅಮೂಲ್ಯ ಸೇವೆಯ ಮೂಲಕ ನೀವು ವಿಶ್ವಸಂಸ್ಥೆಯ ಮೌಲ್ಯಗಳನ್ನು ಪ್ರತಿನಿಧಿಸುತ್ತಿದ್ದೀರಿ‘ ಎಂದು ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

‘ನಿಮ್ಮೊಂದಿಗಿರುವ ಬಹುತೇಕರು ಮಾನವೀಯತೆಯ ಪ್ರತಿಪಾದಕರಾಗಿದ್ದಾರೆ. ಅಂಥವರು ಅಫ್ಗಾನಿಸ್ತಾನದಲ್ಲೇ ಉಳಿದು, ಅಲ್ಲಿನ ಜನರ ಅಗತ್ಯಗಳಿಗೆ ಸ್ಪಂದಿಸಲು ಬಯಸುತ್ತಿದ್ದಾರೆ ಎಂಬುದು ನಮಗೆ ತಿಳಿದಿದೆ. ಇಂಥ ವಿಶ್ವಸಂಸ್ಥೆಯ ಎಲ್ಲ ಸಿಬ್ಬಂದಿಯ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ‘ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.