ADVERTISEMENT

ಕೋವಿಡ್‌–19: ಅಮೆರಿಕ ಮೂಲದ ಉದ್ಯೋಗಿಗಳ ಹಿತರಕ್ಷಣೆಗೆ ಮುಂದಾದ ಟ್ರಂಪ್

ಗ್ರೀನ್‌ಕಾರ್ಡ್‌ ವಿತರಣೆ 60 ದಿನ ಅವಧಿಗೆ ತಡೆ

ಏಜೆನ್ಸೀಸ್
Published 22 ಏಪ್ರಿಲ್ 2020, 10:41 IST
Last Updated 22 ಏಪ್ರಿಲ್ 2020, 10:41 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಕೋವಿಡ್‌–19ನಿಂದಾಗಿ ಔದ್ಯೋಗಿಕ ವಲಯದಲ್ಲಿ ತಲ್ಲಣ ಉಂಟಾಗಿದೆ. ಹೀಗಾಗಿ ಅಮೆರಿಕನ್ನರ ಉದ್ಯೋಗ ರಕ್ಷಿಸುವ ಉದ್ದೇಶದಿಂದ ವಲಸೆ ಹಾಗೂ ಹೊಸದಾಗಿ ಗ್ರೀನ್‌ಕಾರ್ಡ್‌ ವಿತರಣೆಗೆ 60 ದಿನಗಳ ಅವಧಿಗೆ ತಡೆ ನೀಡಲಾಗುವುದು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಪುನರಾಯ್ಕೆ ಬಯಸಿರುವ ಟ್ರಂಪ್‌ ಇಂತಹ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಾಕಷ್ಟು ಸಂಖ್ಯೆಯ ಭಾರತೀಯರು ಅರ್ಜಿ ಸಲ್ಲಿಸಿ, ಗ್ರೀನ್‌ಕಾರ್ಡ್‌ಗಾಗಿ ಕಾಯುತ್ತಿದ್ದಾರೆ. ಟ್ರಂಪ್‌ ಅವರ ನಡೆ ಭಾರತೀಯರನ್ನು ಈಗ ಆತಂಕಕ್ಕೆ ದೂಡಿದೆ.

ADVERTISEMENT

‘ಮೊದಲು ನಾವು ಅಮೆರಿಕನ್ನರ ಹಿತ ಕಾಯಬೇಕಿದೆ. 60 ದಿನಗಳ ನಂತರ, ಗ್ರೀನ್‌ಕಾರ್ಡ್‌ ವಿತರಣೆಗೆ ವಿಧಿಸಿರುವ ತಡೆಯನ್ನು ಮುಂದುವರಿಸಬೇಕೆ ಅಥವಾ ಪರಿಷ್ಕರಿಸಬೇಕೇ ಎಂಬುದನ್ನು ಅವಲೋಕಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದೂ ಟ್ರಂಪ್‌ ಹೇಳಿದ್ದಾರೆ.

ಸದ್ಯ ಜಾರಿಯಲ್ಲಿರುವ ಕಾನೂನಿನ ಪ್ರಕಾರ, ಅಮೆರಿಕ ಸರ್ಕಾರ ವರ್ಷಕ್ಕೆ ಗರಿಷ್ಠ 1,40,000 ಗ್ರೀನ್‌ಕಾರ್ಡ್‌ ನೀಡುತ್ತದೆ ಹಾಗೂ ಪ್ರತಿ ದೇಶಕ್ಕೆ ಶೇ 7ರಷ್ಟು ಗ್ರೀನ್‌ಕಾರ್ಡ್‌ ಎಂಬ ಮಿತಿಯನ್ನು ನಿಗದಿ ಮಾಡಲಾಗಿದೆ.

ವೈಫಲ್ಯ ಮರೆಮಾಚುವ ತಂತ್ರ: ಬಿಡೆನ್‌

‘ಕೋವಿಡ್‌–19 ವ್ಯಾಪಿಸುವುದನ್ನು ತಡೆಗಟ್ಟುವಲ್ಲಿ ಆದ್ಯಕ್ಷ ಟ್ರಂಪ್‌ ವಿಫಲರಾಗಿದ್ದಾರೆ. ಹೀಗಾಗಿ ಜನರ ಗಮನವನ್ನು ಬೇರೆಡೆ ಸೆಳೆಯಲು ವಲಸಿಗರಿಗೆ ವೀಸಾ ನೀಡುವುದಕ್ಕೆ, ಗ್ರೀನ್‌ಕಾರ್ಡ್‌ ವಿತರಣೆಗೆ ತಡೆ ಎಂಬಂತಹ ತಂತ್ರಗಳ ಮೊರೆ ಹೋಗಿದ್ದಾರೆ’ ಎಂದು ಡೆಮಾಕ್ರಟಿಕ್‌ ಪಕ್ಷದ ಮುಖಂಡ ಹಾಗೂ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಜೊ ಬಿಡೆನ್‌ ಟೀಕಿಸಿದ್ದಾರೆ.

ಮತ್ತೊಬ್ಬ ಸಂಸದೆ ನ್ಯಾನ್ಸಿ ಪೆಲೋಸಿ ಅವರೂ ಬಿಡೆನ್‌ ಅವರ ಮಾತಿಗೆ ದನಿಗೂಡಿಸಿದ್ದು, ‘ಈ ಸಂಕಷ್ಟದ ಪರಿಸ್ಥಿತಿಯನ್ನು ನಿರ್ವಹಣೆಯಲ್ಲಿ ಟ್ರಂಪ್‌ ಸಂಪೂರ್ಣ ವಿಫಲರಾಗಿದ್ದಾರೆ’ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.