ADVERTISEMENT

ಸಾವು ಕಡಿಮೆಯಾಗಿದೆ, ಆದರೆ ಡೆಲ್ಟಾ ರೂಪಾಂತರಿ ಬಗ್ಗೆ ಎಚ್ಚರಿಕೆ ಇರಲಿ: ಬೈಡನ್‌

ಪಿಟಿಐ
Published 21 ಜುಲೈ 2021, 5:24 IST
Last Updated 21 ಜುಲೈ 2021, 5:24 IST
ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಶ್ವೇತ ಭವನದಲ್ಲಿ ಮಂಗಳವಾರ ನಡೆದ ಎರಡನೇ ಕ್ಯಾಬಿನೆಟ್‌ ಸಭೆಯನ್ನುದ್ದೇಶಿಸಿ ಅಧ್ಯಕ್ಷ ಜೋ ಬೈಡನ್‌ ಮಾತನಾಡಿದರು                –ಎಪಿ/ಪಿಟಿಐ ಚಿತ್ರ
ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಶ್ವೇತ ಭವನದಲ್ಲಿ ಮಂಗಳವಾರ ನಡೆದ ಎರಡನೇ ಕ್ಯಾಬಿನೆಟ್‌ ಸಭೆಯನ್ನುದ್ದೇಶಿಸಿ ಅಧ್ಯಕ್ಷ ಜೋ ಬೈಡನ್‌ ಮಾತನಾಡಿದರು                –ಎಪಿ/ಪಿಟಿಐ ಚಿತ್ರ   

ವಾಷಿಂಗ್ಟನ್‌: ‘ಅಮೆರಿಕದಲ್ಲಿ ಲಸಿಕಾ ಅಭಿಯಾನದಿಂದಾಗಿ ಕೋವಿಡ್‌–19 ಸಾವಿನ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಆದರೆ ದೇಶದ ನಾಗರಿಕರು ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರ ತಳಿಯಿಂದ ಜಾಗರೂಕರಾಗಿರಬೇಕು’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಎಚ್ಚರಿಸಿದ್ದಾರೆ.

ಬೈಡನ್‌ ನೇತೃತ್ವದ ಸರ್ಕಾರವು ಆರು ತಿಂಗಳು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಬೈಡನ್‌ ಅವರು ಮಂಗಳವಾರ ಕ್ಯಾಬಿನೆಟ್‌ ಸಭೆ ನಡೆಸಿದರು. ಈ ವೇಳೆ ಸಭೆಯನ್ನುದ್ಧೇಶಿಸಿ ಮಾತನಾಡಿದ ಅವರು,‘ ಲಸಿಕಾ ಅಭಿಯಾನದಿಂದಾಗಿ ಕಳೆದ ಆರು ತಿಂಗಳುಗಳಲ್ಲಿ ಕೋವಿಡ್‌ ಸಾವಿನ ಸಂಖ್ಯೆಯು ಶೇಕಡ 90ರಷ್ಟು ಕಡಿಮೆಯಾಗಿದೆ. ಪ್ರಸ್ತುತ ಕೋವಿಡ್‌ ಸೋಂಕಿಗೆ ತುತ್ತಾದವರು ಮತ್ತು ಸಾವಿಗೀಡಾದವರಲ್ಲಿ ಹೆಚ್ಚಿನವರು ಲಸಿಕೆ ಪಡೆಯದವರು. ಹಾಗಾಗಿ ಕೋವಿಡ್‌ ಪ್ರಸರಣ ತಡೆಯಲು ಅತಿ ಸುರಕ್ಷತಾ ಕ್ರಮವೇ ಲಸಿಕೆ. ಆದಷ್ಟು ಬೇಗ ಎಲ್ಲರಿಗೆ ಲಸಿಕೆ ನೀಡುವುದೇ ನಮ್ಮ ಗುರಿ’ ಎಂದರು.

‘ಅಮೆರಿಕ ಮಾತ್ರವಲ್ಲದೇ ಬೇರೆ ರಾಷ್ಟ್ರಗಳ ನಾಗರಿಕರೂ ಲಸಿಕೆ ಪಡೆಯಲು ನಾವು ಸಹಾಯ ಮಾಡುತ್ತಿದ್ದೇವೆ. ಇದರೊಂದಿಗೆ ಉದ್ಯೋಗ ಸೃಷ್ಟಿ ಮತ್ತು ಮಧ್ಯಮ ವರ್ಗದವರ ಏಳಿಗೆಗಾಗಿ ದುಡಿಯುತ್ತಿದ್ದೇವೆ. ನಮ್ಮೊಂದಿಗೆ ಬೇರೆ ದೇಶದ ಆರ್ಥಿಕತೆಯೂ ಬೆಳೆಯಬೇಕು. ಅಮೆರಿಕದ ಆರ್ಥಿಕತೆಯು ಐತಿಹಾಸಿಕ ಪ್ರಗತಿ ಸಾಧಿಸಿದೆ’ ಎಂದು ಅವರು ಅಭಿಪ್ರಾಯ‍ಪಟ್ಟರು.

ADVERTISEMENT

ಮುಂಬರುವ ವಾರಗಳಲ್ಲಿ ಡೆಲ್ಟಾ ರೂಪಾಂತರ ತಳಿಯು ತೀವ್ರಗೊಳ್ಳಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಹಲವು ಭಾಗಗಳಲ್ಲಿ ವರದಿಯಾದ ಹೊಸ ಪ್ರಕರಣಗಳ ಪೈಕಿ ಶೇಕಡ 80ರಷ್ಟು ಡೆಲ್ಟಾ ರೂಪಾಂತರ ತಳಿ ಪ್ರಕರಣಗಳಿವೆ.

‘ಡೆಲ್ಟಾ ರೂಪಾಂತರ ತಳಿಗೆ ವಯಸ್ಕರು ಮತ್ತು ಮಕ್ಕಳು ತುತ್ತಾಗುತ್ತಿದ್ದಾರೆ. ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ’ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.