ADVERTISEMENT

ಭಾರತದಲ್ಲಿ ನ್ಯಾಯಸಮ್ಮತ ವಾತಾವರಣ: ಷಿಯೋಮಿ ತನಿಖೆ ಬಗ್ಗೆ ಚೀನಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಮೇ 2022, 14:43 IST
Last Updated 9 ಮೇ 2022, 14:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್(ಪಿಟಿಐ): ತನ್ನ ದೇಶದ ಕಂಪನಿಗಳಿಗೆ ಭಾರತವು ನಿಷ್ಪಕ್ಷಪಾತ ಮತ್ತು ನ್ಯಾಯಸಮ್ಮತವಾದ ವಾತಾವರಣವನ್ನು ಕಲ್ಪಿಸಲಿದೆ ಎಂಬ ಭರವಸೆ ಇಟ್ಟಿರುವುದಾಗಿ ಚೀನಾ ಹೇಳಿದೆ.ಭಾರತದಿಂದ ಹಣವನ್ನು ಅಕ್ರಮವಾಗಿ ವಿದೇಶಕ್ಕೆ ರವಾನೆ ಮಾಡಿದ ಪ್ರಕರಣಕ್ಕೆ ಚೀನಾದ ಸ್ಮಾರ್ಟ್‌ಫೋನ್ ಉತ್ಪಾದಕ ಷಿಯೋಮಿ ಕಂಪನಿಯ ಹಿರಿಯ ಅಧಿಕಾರಿಗಳು ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿರುವ ಬೆನ್ನಲ್ಲೇ, ಚೀನಾದ ಈ ಹೇಳಿಕೆ ಹೊರಬಿದ್ದಿದೆ.

ಜಾರಿ ನಿರ್ದೇಶನಾಲಯವು ತಮ್ಮ ಮೇಲೆ ದೈಹಿಕ ಹಿಂಸೆ ಮತ್ತು ದಬ್ಬಳಿಕೆ ನಡೆಸುತ್ತಿದೆ ಎಂಬ ಷಿಯೋಮಿ ಅಧಿಕಾರಿಗಳ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಅವರು, 'ಈ ಕುರಿತು ಚೀನಾ ತೀವ್ರ ನಿಗಾ ವಹಿಸಿದೆ' ಎಂದು ಹೇಳಿದ್ದಾರೆ.

ಚೀನಾದ ಕಂಪನಿಗಳಿಗೂ ಭಾರತವು ನಿಷ್ಪಕ್ಷಪಾತ, ನ್ಯಾಯಸಮ್ಮತವಾದ ವಾತಾವರಣವನ್ನು ಕಲ್ಪಿಸಲಿದೆ. ಅಲ್ಲದೆ, ಕಾನೂನು ಮತ್ತು ನಿಯಂತ್ರಣಗಳನ್ನು ಪಾಲಿಸಿಕೊಂಡು ತನಿಖೆ ನಡೆಸಲಿದ್ದು, ಈ ಮೂಲಕ ಜಾಗತಿಕ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಭಾವಿಸಿರುವುದಾಗಿ ಝಾವೊ ಹೇಳಿದ್ದಾರೆ. ಅಲ್ಲದೆ ತನ್ನ ದೇಶದ ಕಂಪನಿಗಳಿಗೆ ತಾವು ಉದ್ದಿಮೆ ನಡೆಸುವ ದೇಶಗಳ ನೆಲದ ಕಾನೂನುಗಳು ಮತ್ತು ನಿಬಂಧನೆಗಳನ್ನು ಪಾಲಿಸುವಂತೆ ಸೂಚಿಸಲಾಗುತ್ತದೆ. ಆದರೆ ಇದೇ ಸಂದರ್ಭದಲ್ಲಿ ಚೀನಾದ ಕಂಪನಿಗಳ ಕಾನೂನಾತ್ಮಕ ಹಕ್ಕುಗಳು ಮತ್ತು ಹಿತಾಸಕ್ತಿಯನ್ನು ಎತ್ತಿಹಿಡಿಯಲು ಚೀನಾ ಸರ್ಕಾರ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.