ADVERTISEMENT

ಮ್ಯಾನ್ಮಾರ್‌: ಮಿಲಿಟರಿ ಮೇಲಿನ ನಿರ್ಬಂಧ ತೀವ್ರಗೊಳಿಸಲು ಹೆಚ್ಚಿದ ಒತ್ತಡ

ಏಜೆನ್ಸೀಸ್
Published 8 ಮಾರ್ಚ್ 2021, 7:27 IST
Last Updated 8 ಮಾರ್ಚ್ 2021, 7:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬ್ಯಾಂಕಾಕ್‌: ಮ್ಯಾನ್ಮಾರ್‌ನಲ್ಲಿ ಸೇನೆಯು ಪ್ರತಿಭಟನಕಾರರ ಮೇಲೆ ನಡೆಸುತ್ತಿರುವ ಹಿಂಸಾಚಾರ ದಿನೇ ದಿನೇ ಹೆಚ್ಚಾಗುತ್ತಿದೆ. ಹಾಗಾಗಿ ಮ್ಯಾನ್ಮಾರ್‌ನ ಸೇನೆ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ಹೇರುವಂತೆ ವಿಶ್ವಸಂಸ್ಥೆಯ ಮೇಲೆ ಒತ್ತಡ ಹೇರಲಾಗುತ್ತಿದೆ.

ಈಗಾಗಲೇ ಆರ್ಥಿಕ ಬಿಕ್ಕಟ್ಟು, ಸಾಂಕ್ರಾಮಿಕದಿಂದ ನೊಂದಿರುವ ಜನರಿಗೆ ಮಿಲಿಟರಿ ದಂಗೆ ಇನ್ನಷ್ಟು ಆಘಾತವನ್ನು ನೀಡಿದೆ. ಮಿಲಿಟರಿ ಆಡಳಿತದ ವಿರುದ್ಧ ಪ್ರತಿಭಟಿಸಿದ ಹಲವರು ಬಂಧನಕ್ಕೂ ಒಳಗಾಗಿದ್ದಾರೆ.

‘ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸೇನೆಯ ಮೇಲೆ ಇನ್ನಷ್ಟು ಒತ್ತಡವನ್ನು ಹೇರಬೇಕು. ಅದಕ್ಕಾಗಿ ಸೇನೆಯ ಹಣಕಾಸು ನೆರವನ್ನು ಕಡಿತಗೊಳಿಸಬೇಕು’ ಎಂದು ಹೋರಾಟಗಾರರು, ತಜ್ಞರು ಒತ್ತಾಯಿಸಿದ್ದಾರೆ.

ADVERTISEMENT

‘ಮ್ಯಾನ್ಮಾರ್‌ನ ಮಿಲಿಟರಿ ಆಡಳಿತದ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಕ್ರಮಕೈಗೊಳ್ಳಬೇಕು’ ಎಂದು ಮ್ಯಾನ್ಮಾರ್‌ನ ವಿಶ್ವಸಂಸ್ಥೆಯ ರಾಯಭಾರಿ ಮನವಿ ಮಾಡಿದ್ದರು.

‘ಮ್ಯಾನ್ಮಾರ್‌ನ ಸೇನೆಯ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದು ಅಷ್ಟು ಸುಲಭವಲ್ಲ. ಏಕೆಂದರೆ ಮ್ಯಾನ್ಮಾರ್‌ನ ವ್ಯಾಪಾರ ಪಾಲುದಾರರಾಗಿರುವ ಮತ್ತು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಶಾಶ್ವತ ಸದಸ್ಯರೂ ಆಗಿರುವ ರಷ್ಯಾ ಹಾಗೂ ಚೀನಾ, ತಮ್ಮ ವೀಟೊ ಅಧಿಕಾರವನ್ನು ಪ್ರಯೋಗಿಸಿ, ಮ್ಯಾನ್ಮಾರ್‌ ವಿರುದ್ಧದ ಕ್ರಮವನ್ನು ರದ್ದುಗೊಳಿಸುವ ಸಾಧ್ಯತೆಗಳಿವೆ’ ಎಂದು ವಿಶ್ವಸಂಸ್ಥೆ ಹೇಳಿದೆ.

‘ಆದರೆ ಈಗಾಗಲೇ ಅಮೆರಿಕ, ಬ್ರಿಟನ್‌, ಕೆನಡಾ ಮ್ಯಾನ್ಮಾರ್‌ ಸೇನೆಯ ವಿರುದ್ಧ ಕೆಲವೊಂದು ನಿರ್ಬಂಧಗಳನ್ನು ಹೇರಿವೆ. ಅಮೆರಿಕವು ಸೆಂಟ್ರಲ್‌ ಬ್ಯಾಂಕಿನಿಂದ ನೀಡಲಾಗುತ್ತಿದ್ದ ಹಣಕಾಸಿನ ನೆರವನ್ನು ಕೂಡ ಕಡಿತಗೊಳಿಸಿದೆ’ ಎಂದು ವಿಶ್ವಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.