ADVERTISEMENT

ಮಾಲ್ಡೀವ್ಸ್‌ ಮಾಜಿ ಉಪಾಧ್ಯಕ್ಷ ಗಫೂರ್‌ ಮಾಲೆಯಲ್ಲಿ ಬಂಧನ

ಆಶ್ರಯ ಕೋರಿಕೆ ತಿರಸ್ಕರಿಸಿ ವಾಪಸ್ ಕಳುಹಿಸಿದ್ದ ಭಾರತ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 18:17 IST
Last Updated 3 ಆಗಸ್ಟ್ 2019, 18:17 IST
ಗಫೂರ್
ಗಫೂರ್   

ನವದೆಹಲಿ/ಮಾಲೆ: ಮಾಲ್ಡೀವ್ಸ್‌ನ ಮಾಜಿ ಉಪಾಧ್ಯಕ್ಷ ಅಹ್ಮದ್‌ ಅದೀಬ್ ಅಬ್ದುಲ್‌ ಗಫೂರ್ ಅವರನ್ನು ಶನಿವಾರ ಮಾಲ್ಡೀವ್ಸ್‌ ಪೊಲೀಸರು ಮಾಲೆಯಲ್ಲಿ ಬಂಧಿಸಿದ್ದಾರೆ.

ಅಕ್ರಮವಾಗಿ ಭಾರತದೊಳಗೆ ಬಂದು, ಆಶ್ರಯ ಕೋರಿದ್ದ ಗಫೂರ್ ಅವರನ್ನು ಶನಿವಾರ ಮರಳಿ ಅವರ ದೇಶಕ್ಕೆ ಕಳುಹಿಸಲಾಗಿತ್ತು.

ಬೋಟ್‌ವೊಂದರ ಸಿಬ್ಬಂದಿ ಎಂದು ಹೇಳಿಕೊಂಡಿದ್ದ ಅವರು, ಇತರ 9 ಜನ ಸಿಬ್ಬಂದಿ ಜೊತೆಗೆ ಆಗಸ್ಟ್‌ 1ರಂದು ತೂತ್ತುಕುಡಿ ಬಂದರಿಗೆ ಬಂದಿದ್ದರು. ಆದರೆ, ಬೋಟ್‌ನಿಂದ ಇಳಿಯಲು ಅವರಿಗೆ ಅಧಿಕಾರಿಗಳು ಅವಕಾಶ ನೀಡಿರಲಿಲ್ಲ. ನಂತರ ಕೇಂದ್ರದ ವಿವಿಧ ಸಂಸ್ಥೆಗಳ ಅಧಿಕಾರಿಗಳು ಅವರನ್ನು ತೀವ್ರ ವಿಚಾರಣೆಗೂ ಒಳಪಡಿಸಿದ್ದರು.

ADVERTISEMENT

‘ದೇಶದೊಳಗೆ ಪ್ರವೇಶಿಸಲು ಬೇಕಾದ ಅಧಿಕೃತ ದಾಖಲೆಗಳು ಹೊಂದಿರದ ಕಾರಣ, ಅವರು ಬಂದಿದ್ದ ಬೋಟ್‌ನಲ್ಲಿಯೇ ಗಫೂರ್‌ ಅವರನ್ನು ಮರಳಿ ಕಳುಹಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಅವರಿದ್ದ ಬೋಟ್‌ ಭಾರತದ ಸಾಗರ ಗಡಿ ದಾಟುವುದರ ಮೇಲೆ ಅಧಿಕಾರಿಗಳು ನಿಗಾ ಇಟ್ಟಿದ್ದರು.

‘ಗಫೂರ್‌ ಅವರಿಗೆ ಮಾಲ್ಡೀವ್ಸ್‌ನಲ್ಲಿ ಜೀವ ಬೆದರಿಕೆ ಇದೆ. ಹೀಗಾಗಿ ಅವರು ಭಾರತದಲ್ಲಿ ಆಶ್ರಯ ಕೋರಿದ್ದರು’ ಎಂದು ಗಫೂರ್‌ ಪರ ವಕಾಲತ್ತು ವಹಿಸಿರುವ ಬ್ರಿಟನ್‌ ಮೂಲದ ವಕೀಲರು ಹೇಳಿದ್ದಾರೆ.

‘ಗಫೂರ್‌ ಅವರು ಭಾರತದಲ್ಲಿ ಇಲ್ಲ. ಹೀಗಾಗಿ ಅವರನ್ನು ವಶಕ್ಕೆ ಪಡೆಯಲಾಗಿದೆ ಅಥವಾ ಬಂಧಿಸಲಾಗಿದೆ ಎಂಬ ವರದಿಗಳು ಸುಳ್ಳು’ ಎಂದು ಸಂಬಂಧಿಸಿದ ಅಧಿಕಾರಿಗಳು ಇಲ್ಲಿ ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.