ADVERTISEMENT

ಅಲ್ ಕೈದಾ ಉಗ್ರನ ತಂದೆ ಅಫ್ಗನ್‌ಗೆ ಗಡೀಪಾರು

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 12:48 IST
Last Updated 11 ಜುಲೈ 2022, 12:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್‌: ನಗರದ ಸಬ್‌ವೇನಲ್ಲಿ 2009ರಲ್ಲಿ ಬಾಂಬ್‌ ಇರಿಸಿದ ಸಂಚುಕೋರ ಅಲ್‌ ಕೈದಾ ಸಂಘಟನೆಯ ಉಗ್ರ ನಜಿಬುಲ್ಲಾ ಝಝಿಯ ತಂದೆ ಮೊಹಮ್ಮದ್‌ ವಲಿ ಝಝಿಯನ್ನು (66) ಅಮೆರಿಕವು ಅಫ್ಗಾನಿಸ್ತಾನಕ್ಕೆ ಗಡೀಪಾರು ಮಾಡಿದೆ.

2012ರ ಫೆಬ್ರುವರಿಯಲ್ಲಿ ವೀಸಾ ವಂಚನೆ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದ.ಅಮೆರಿಕದ ವಲಸೆ ಮತ್ತು ಸೀಮಾಸುಂಕ ಜಾರಿ ಏಜೆನ್ಸಿ (ಐಸಿಇ) ಮತ್ತು ಗಡೀಪಾರು ಕಾರ್ಯಾಚರಣೆಗಳ ಜಾರಿ ಏಜೆನ್ಸಿಯ (ಇಆರ್‌ಒ) ಡೆನ್ವರ್‌ ಕ್ಷೇತ್ರ ಕಚೇರಿಯು, ಝಝಿಯನ್ನು ಜೂನ್‌ 13ರಂದು ಅಫ್ಗಾನಿಸ್ತಾನಕ್ಕೆ ಹೋಗುವ ವಿಮಾನಕ್ಕೆ ಹತ್ತಿಸುವ ಮೂಲಕ ಗಡೀಪಾರು ಮಾಡಿದೆ. ಝಝಿ ಕಾಬೂಲ್‌ಗೆ ಬಂದಿಳಿದಿದ್ದಾರೆ. ಈತ 2007ರಲ್ಲಿ ಅಮೆರಿಕದ ಪೌರತ್ವದ ಮೇಲೆ ವಲಸೆ ಹೋಗಿದ್ದ.

ವೀಸಾ ವಂಚನೆ ಸಂಬಂಧ ಈತನಿಗೆ ನ್ಯೂಯಾರ್ಕ್‌ ಪೂರ್ವ ಜಿಲ್ಲೆಯ ನ್ಯಾಯಾಧೀಶರು 54 ತಿಂಗಳ ಶಿಕ್ಷೆ ವಿಧಿಸಿದ್ದರು. ಝಝಿಯ ಪೌರತ್ವವನ್ನು 2018ರಲ್ಲಿ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶರು ರದ್ದುಪಡಿಸಿದ್ದರು.ಝಝಿಗೆ ವಿನಾಯ್ತಿ ನೀಡಲು ನಿರಾಕರಿಸಿದ ಡೆನ್ವರ್‌ನ ವಲಸೆ ನ್ಯಾಯಾಧೀಶರು, ಕಳೆದ ಫೆಬ್ರುವರಿಯಲ್ಲೇ ಗಡೀಪಾರಿಗೆ ಆದೇಶಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.