ADVERTISEMENT

ಮಾಲ್ದೀವ್ಸ್‌ ಸಂಸತ್ತಿನಲ್ಲಿ ಹೊಡೆದಾಟ!

ಪಿಟಿಐ
Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಾಲಿ: ಮಾಲ್ದೀವ್ಸ್‌ನ ಸಂಸತ್ತಿನಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ, ಅಧ್ಯಕ್ಷ ಮೊಹಮ್ಮದ್ ಮುಯಿಜು ಸಂಪುಟದ ನಾಲ್ಕು ಸದಸ್ಯರಿಗೆ ಅನುಮೋದನೆ ನೀಡುವ ವಿಚಾರವಾಗಿ ಹೊಡೆದಾಟ ನಡೆದಿದೆ. ಹೊಡೆದಾಟ ನಡೆದಿರುವುದಕ್ಕೆ ಸಂಬಂಧಿಸಿದ ದೃಶ್ಯಾವಳಿಗಳನ್ನು ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ.

ಸಂಪುಟದ ವಿಚಾರವಾಗಿ ಮತಚಲಾವಣೆಗೂ ಮೊದಲು, ಮುಯಿಜು ಸಂಪುಟದ ನಾಲ್ಕು ಮಂದಿಗೆ ಅನುಮೋದನೆ ನೀಡುವುದನ್ನು ತಡೆಹಿಡಿಯಲು ಪ್ರಮುಖ ವಿರೋಧ ಪಕ್ಷವಾದ ಮಾಲ್ದೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ತೀರ್ಮಾನಿಸಿತು. ಇದಾದ ನಂತರ ಸರ್ಕಾರದ ಪರವಾಗಿ ಇರುವ ಸಂಸದರು ಪ್ರತಿಭಟನೆ ಆರಂಭಿಸಿದರು, ಕಲಾಪ ಮುಂದುವರಿಯುವುದಕ್ಕೆ ಅಡ್ಡಿ ಉಂಟುಮಾಡಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸಂಸದರಾದ ಅಬ್ದುಲ್ಲಾ ಶಹೀಂ ಅಬ್ದುಲ್ ಹಕೀಂ ಮತ್ತು ಅಹ್ಮದ್ ಇಯಾಸಾ ಅವರ ನಡುವೆ ಘರ್ಷಣೆ ನಡೆದಿದೆ. ಶಹೀಂ ಅವರಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೂಡ ವರದಿಯಾಗಿದೆ. ವಿರೋಧ ಪಕ್ಷಗಳ ಸಂಸದೀಯ ಗುಂಪು, ಮುಯಿಜು ಸಂಪುಟದ ಕೆಲವು ಸದಸ್ಯರಿಗೆ ಒಪ್ಪಿಗೆ ನೀಡದೆ ಇರಲು ತೀರ್ಮಾನಿಸಿದ ಕಾರಣದಿಂದಾಗಿ ಆಡಳಿತಾರೂಢ ಪಿಪಿಎಂ ಮತ್ತು ಪಿಎನ್‌ಸಿ ಮೈತ್ರಿಕೂಟದ ಸದಸ್ಯರು ಸಂಸತ್ತಿನ ಕಲಾಪಕ್ಕೆ ಅಡ್ಡಿ ಉಂಟುಮಾಡಿದರು ಎಂದು ವರದಿಗಳು ಹೇಳಿವೆ.

ADVERTISEMENT

ಸ್ಪೀಕರ್ ಆಸನದ ಎದುರು ಘರ್ಷಣೆಯಲ್ಲಿ ತೊಡಗಿರುವ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿರುವ ವಿಡಿಯೊದಲ್ಲಿ ಇವೆ. ಸಂಸದ ಹಸನ್ ಜರೀರ್ ಅವರಿಗೆ ಕೂಡ ಗಾಯಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.