ADVERTISEMENT

ಅಮೆರಿಕದಲ್ಲಿ ಪತ್ರಿಕಾ ಕಚೇರಿ ಮೇಲೆ ಗುಂಡಿನ ದಾಳಿ: ಐವರ ಹತ್ಯೆ

ಏಜೆನ್ಸೀಸ್
Published 29 ಜೂನ್ 2018, 12:22 IST
Last Updated 29 ಜೂನ್ 2018, 12:22 IST
ಗುಂಡಿನ ದಾಳಿ ಬಳಿಕ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ. ರಾಯಿಟರ್ಸ್‌ ಚಿತ್ರ
ಗುಂಡಿನ ದಾಳಿ ಬಳಿಕ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ. ರಾಯಿಟರ್ಸ್‌ ಚಿತ್ರ   

ಅನ್ನಾಪೊಲಿಸ್‌(ಅಮೆರಿಕ):ಬಂದೂಕುಧಾರಿಯೊಬ್ಬ ಅನ್ನಾಪೊಲಿಸ್‌ನಲ್ಲಿನ ‘ದಿ ಕ್ಯಾಪಿಟಲ್ ಗ್ಯಾಜೆಟ್‌’ ಪತ್ರಿಕಾ ಕಚೇರಿ ಮೇಲೆ ಗುರುವಾರ ಗುಂಡು, ಗ್ರೆನೆಡ್‌ ದಾಳಿ ನಡೆಸಿದ್ದು, ಐವರನ್ನು ಹತ್ಯೆ ಮಾಡಿದ್ದಾನೆ.

ಕಚೇರಿಗೆ ನುಗ್ಗಿದ ವ್ಯಕ್ತಿ ಗುಂಡು ಹಾರಿಸಿದ್ದಾನೆ. ಬಳಿಕ, ಹೊಗೆ ಹೊರಹೊಮ್ಮಿಸುವ ಗ್ರೆನೆಡ್‌ ಸ್ಫೋಟಿಸಿದ್ದಾನೆ. ಈ ಘಟನೆಯನ್ನು ಪೊಲೀಸರು ‘ಉದ್ದೇಶಿತ ದಾಳಿ’ ಎಂದು ವಿವರಿಸಿದ್ದಾರೆ.

ಗುಂಡಿನ ದಾಳಿ ಸಂಬಂಧ ಮೇರಿಲ್ಯಾಂಡ್‌ನ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಬಂದೂಕುಧಾರಿಯೊಬ್ಬ ಗಾಜಿನ ಬಾಗಿಲನ್ನು ಒಡೆದು ಕಚೇರಿಯ ಒಳನುಗ್ಗಿ ಹಲವು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ ಎಂದು ಪತ್ರಿಕೆಯ ವರದಿಗಾರರೊಬ್ಬರು ಟ್ವೀಟ್‌ ಮಾಡಿದ್ದಾರೆ.

ಗುಂಡಿನ ದಾಳಿಯಲ್ಲಿ ಐವರು ಹತ್ಯೆಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಅನ್ನಿ ಅರುಂಡೆಲ್‌ ಕೌಂಟಿಯ ಪೊಲೀಸ್‌ ಮುಖ್ಯಸ್ಥ ಬಿಲ್‌ ಕ್ರಾಂಪ್‌ ಅವರು ಮೇರಿಲ್ಯಾಂಡ್‌ನ ರಾಜಧಾನಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಇದು ಕ್ಯಾಪಿಟಲ್‌ ಗ್ಯಾಜೆಟ್‌ಅನ್ನು ಗುರಿಯಾಗಿರಿಸಿ ನಡೆದ ದಾಳಿ’ ಎಂದು ಅವರು ವಿವರಿಸಿದ್ದು, ದಾಳಿಯ ಉದ್ದೇಶ ಇನ್ನೂ ತಿಳಿದಿಲ್ಲ ಎಂದು ಹೇಳಿದ್ದಾರೆ.

ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಖಂಡಿಸಿದ್ದು, ಘಟನೆಯಲ್ಲಿ ಸಾವಿಗೀಡಾದವರಿಗೆ ಸಂತಾಪ ಸೂಚಿಸಿದ್ದಾರೆ.

‘ದಿ ಕ್ಯಾಪಿಟಲ್‌’ 1884ರಿಂದ ಅನ್ನಾಪೊಲಿಸ್‌ನಲ್ಲಿ ಪ್ರಕಟವಾಗುತ್ತಿರುವ ದೈನಿಕ ಪತ್ರಿಕೆ. ‘ದಿ ಕ್ಯಾಪಿಟಲ್‌ ಗ್ಯಾಜೆಟ್‌’ ಇದರ ಸಹ ಪತ್ರಿಕೆಯಾಗಿದ್ದು, ಅಮೆರಿಕದಲ್ಲಿನ ಅತ್ಯಂತ ಐತಿಹಾಸಿಕ ಪತ್ರಿಕೆಯಾಗಿದೆ. 18ನೇ ಶತಮಾನದಲ್ಲಿ ಆರಂಭವಾಗ ಪತ್ರಿಕೆ ಇದಾಗಿದೆ.

‘ದಿ ಕ್ಯಾಪಿಟಲ್‌’ ಪತ್ರಿಕೆ.ಚಿತ್ರ: ಎಎಫ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.