ಹೀಥ್ರೊ ವಿಮಾನ ನಿಲ್ದಾಣ
ಲಂಡನ್: ಲಂಡನ್‌ನ ಹೀಥ್ರೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಚಟುವಟಿಕೆ ಸಹಜ ಸ್ಥಿತಿಗೆ ಮರಳಿದ್ದು, ವಿಮಾನಗಳ ಸಂಚಾರ ಶನಿವಾರ ಪುನರಾರಂಭವಾಗಿದೆ’ ಎಂದು ವಿಮಾನ ನಿಲ್ದಾಣ ತಿಳಿಸಿದೆ.
ನಿಲ್ದಾಣ ಸಮೀಪದ ವಿದ್ಯುತ್ ಉಪ ಸ್ಥಾವರದಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಿಂದಾಗಿ ವಿಮಾನಗಳ ಸಂಚಾರ ಸ್ಥಗಿತಗೊಳಿಸಿ ವಿಮಾನ ಸಂಚಾರ ರದ್ದುಪಡಿಸಲಾಗಿತ್ತು. ಕೆಲ ವಿಮಾನಗಳ ಸಂಚಾರ ಮಾರ್ಗ ಬದಲಿಸಲಾಗಿತ್ತು.
‘ಹೆಚ್ಚುವರಿ ಉದ್ಯೋಗಿಗಳಿದ್ದು, ಹೆಚ್ಚುವರಿ 10,000 ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತಷ್ಟು ವಿಮಾನಗಳ ಹಾರಾಟಕ್ಕೆ ಸಮಯ ನಿಗದಿಪಡಿಸಿದ್ದೇವೆ’ ಎಂದು ವಿಮಾನ ನಿಲ್ದಾಣದ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ.
ಅಗ್ನಿ ಅವಘಡದ ಹಿನ್ನೆಲೆಯಲ್ಲಿ ಶುಕ್ರವಾರ ಅಂದಾಜು 1,300 ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿತ್ತು. ಇದರಿಂದಾಗಿ 2 ಲಕ್ಷ ಪ್ರಯಾಣಿಕರಿಗೆ ಅನನುಕೂಲವಾಗಿತ್ತು.
ಅಗ್ನಿ ಅವಘಡ ಹಾಗೂ ಇದರಿಂದಾಗಿ ಪ್ರಮುಖ ವಿಮಾನ ನಿಲ್ದಾಣದ ಕಾರ್ಯಚಟುವಟಿಕೆ ಬಂದ್ ಕುರಿತಂತೆ ಹಲವರು ನಿಲ್ದಾಣದ ಆಡಳಿತವನ್ನು ತೀವ್ರವಾಗಿ ಟೀಕಿಸಿದ್ದಾರೆ.
‘ಸ್ಥಳೀಯ ಆಡಳಿತವು ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ವೈಫಲ್ಯ ಕುರಿತು ವಿಸ್ತೃತ ತನಿಖೆ ಅಗತ್ಯವಿದ್ದು, ಮತ್ತೆ ಇಂತಹ ಸ್ಥಿತಿಮರಳದಂತೆ ಜಾಗ್ರತೆ ವಹಿಸಬೇಕಾಗಿದೆ’ ಎಂದು ಬ್ರಿಟನ್ ಸರ್ಕಾರ ಪ್ರತಿಕ್ರಿಯಿಸಿದೆ.
ನವದೆಹಲಿ: ಹೀಥ್ರೊ ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾ, ವರ್ಜಿನ್ ಅಟ್ಲಾಂಟಿಕ್ ಮತ್ತು ಬ್ರಿಟಿಷ್ ಏರ್‌ವೇಸ್‌ನಿಂದ ವಿಮಾನ ಕಾರ್ಯಾಚರಣೆ ಶನಿವಾರ ಪುನರಾಂಭಗೊಂಡಿದೆ.
ವಿಮಾನಗಳ ಹಾರಾಟ ರದ್ದಾಗಿದ್ದರಿಂದ ದೆಹಲಿ ಸೇರಿ ವಿವಿಧ ಸ್ಥಳಗಳಿಂದ ಲಂಡನ್‌ಗೆ ಪ್ರಯಾಣಿಸಲು ಸಜ್ಜಾಗಿದ್ದ ಸಾವಿರಾರು ಪ್ರಯಾಣಿಕರು ತೊಂದರೆಗೆ ಸಿಲುಕಿದ್ದರು. ಈ ಮೊದಲೇ ನಿಗದಿಯಾಗಿದ್ದಂತೆ ವಿಮಾನಗಳ ಹಾರಾಟ ಬೆಳಿಗ್ಗೆಯೇ ಆರಂಭಗೊಂಡಿದೆ ಎಂದು ವಿಮಾನಯಾನ ಕಂಪನಿಗಳು ತಿಳಿಸಿವೆ.
ಪ್ರತಿದಿನ ಮುಂಬೈ ಮತ್ತು ದೆಹಲಿಯಿಂದ ಬ್ರಿಟಿಷ್ ಏರ್‌ವೇಸ್‌ನ ಎಂಟು ವಿಮಾನಗಳು ಹೀಥ್ರೊಗೆ ಹಾರಾಟ ನಡೆಸುತ್ತವೆ. ದೆಹಲಿ, ಮುಂಬೈ ಮತ್ತು ಬೆಂಗಳೂರಿನಿಂದ ವರ್ಜಿನ್ ಅಟ್ಲಾಂಟಿಕ್‌ಗೆ ಸೇರಿದ ಐದು ವಿಮಾನಗಳು ಮತ್ತು ಏರ್ ಇಂಡಿಯಾದ ಆರು ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.