ADVERTISEMENT

ಕೆರೊಲಿನಾದಲ್ಲಿ ಫ್ಲೋರೆನ್ಸ್‌ ಚಂಡಮಾರುತ: 5 ಮಂದಿ ಸಾವು

ಮುಂದಿನ ವಾರ ಟ್ರಂಪ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2018, 11:34 IST
Last Updated 15 ಸೆಪ್ಟೆಂಬರ್ 2018, 11:34 IST
ಉತ್ತರ ಕೆರೊಲಿನಾದ ಚಂಡಮಾರುತದ ಹೊಡೆತಕ್ಕೆ ಮನೆಯೊಂದರ ಮೇಲೆ ಮರ ಉರುಳಿಬಿದ್ದಿರುವುದು –ರಾಯಿಟರ್ಸ್‌ ಚಿತ್ರ
ಉತ್ತರ ಕೆರೊಲಿನಾದ ಚಂಡಮಾರುತದ ಹೊಡೆತಕ್ಕೆ ಮನೆಯೊಂದರ ಮೇಲೆ ಮರ ಉರುಳಿಬಿದ್ದಿರುವುದು –ರಾಯಿಟರ್ಸ್‌ ಚಿತ್ರ   

ವಿಲ್‌ಮಿಂಗ್‌ಟನ್‌ (ಎಎಫ್‌ಪಿ): ಉತ್ತರ ಮತ್ತು ದಕ್ಷಿಣ ಕೆರೊಲಿನಾದಲ್ಲಿ ಬೀಸಿದ ಫ್ಲೋರೆನ್ಸ್‌ ಚಂಡಮಾರುತದಿಂದ ತಾಯಿ ಮತ್ತು ಮಗು ಸೇರಿದಂತೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಬಿರುಗಾಳಿಗೆ ಅಮೆರಿಕದ ಪೂರ್ವಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಚಂಡಮಾರುತದಿಂದ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬಿರುಗಾಳಿಗೆ ಸಿಲುಕಿ ನ್ಯೂಬರ್ನ್‌ ಪಟ್ಟಣದಲ್ಲಿಹಲವು ಮನೆಗಳು ಸಂಪೂರ್ಣವಾಗಿ ನಾಶಗೊಂಡಿವೆ.

‘ಚಂಡಮಾರುತದಿಂದ ಉತ್ತರ ಮತ್ತು ದಕ್ಷಿಣ ಕೆರೊಲಿನಾದಲ್ಲಿ ಸುರಿದ ಮಳೆ ಪ್ರಮಾಣ ಕಳೆದ 1ಸಾವಿರ ವರ್ಷಗಳಲ್ಲೇ ಗರಿಷ್ಠ’ ಎಂದುಉತ್ತರ ಕೆರೊಲಿನಾದ ಗವರ್ನರ್‌ ರಾಯ್‌ ಕೂಪರ್‌ ತಿಳಿಸಿದರು. ಮುಂದಿನ ವಾರದಲ್ಲಿ ನದಿಗಳು ಮತ್ತಷ್ಟು ಉಕ್ಕಿ ಹರಿಯಲಿದ್ದು, ಬಿರುಗಾಳಿ ಹಾಗೂ ಜನರ ಪ್ರಾಣಕ್ಕೂ ಅಪಾಯ ಉಂಟುಮಾಡುವ ಸಾಧ್ಯತೆಯಿದೆ ಎಂದರು.

ADVERTISEMENT

ಬಿರುಗಾಳಿ ಹೊಡೆತಕ್ಕೆ ಉತ್ತರ ಕೆರೊಲಿನಾದ 7.5 ಲಕ್ಷ ಮನೆಗಳ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, 21 ಸಾವಿರ ಮಂದಿಗೆ 157 ಪರಿಹಾರ ಕೇಂದ್ರಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಇಲ್ಲಿನ ನ್ಯೂ ಹ್ಯಾನೊವರ್‌ ಕಂಟ್ರಿ ಪ್ರದೇಶದಲ್ಲಿ ಮನೆ ಮೇಲೆ ಮರಬಿದ್ದ ಪರಿಣಾಮ ತಾಯಿ ಮತ್ತು ಮಗು ಮೃತಪಟ್ಟಿದ್ದಾರೆ. ಲೆನೊಯಿರ್‌ ಕಂಟ್ರಿ ಪ್ರದೇಶದಲ್ಲಿ ಮತ್ತೊಂದು ಸಾವು ಸಂಭವಿಸಿದೆ.

ಟ್ರಂಪ್‌ ಭೇಟಿ: ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮುಂದಿನ ವಾರ ಚಂಡಮಾರುತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನ ಅಧಿಕಾರಿಗಳು ತಿಳಿಸಿದ್ದಾರೆ. ಪರಿಹಾರ ಹಾಗೂ ಪುನರ್‌ನಿರ್ಮಾಣ ಕಾರ್ಯಕ್ಕೆ ತೊಡಕು ಉಂಟಾಗದಂತೆ ತಡೆಯುವ ನಿಟ್ಟಿನಲ್ಲಿ ಪ್ರವಾಸವನ್ನು ಮುಂದೂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಿವಾದ ಸೃಷ್ಟಿಸಿದ ಸಾವಿನ ಲೆಕ್ಕಾಚಾರ: ಚಂಡಮಾರುತ ಸಂಬಂಧಿತ ಅವಘಡಗಳಲ್ಲಿ ಸಾವಿನ ಸಂಖ್ಯೆ ಜಾದೂವಿನಂತೆ ಏಕಾಏಕಿ ಏರಿಕೆಯಾಗುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಟ್ವೀಟ್‌ ಮಾಡುವ ಡೆಮಾಕ್ರಟಿಕ್‌ ಸಂಸದರನ್ನು ಲೇವಡಿ ಮಾಡಿದ್ದಾರೆ.

‘ಕಳೆದ ವರ್ಷದ ಮರಿಯಾ ಚಂಡಮಾರುತದಿಂದ ಪೋರ್ಟರಿಕೊದಲ್ಲಿ 3 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದರು ಎಂದು ಸಾರ್ವಜನಿಕ ಆರೋಗ್ಯ ವಿಭಾಗದ ತಜ್ಞರು ಅಂದಾಜಿಸಿದ್ದರು. ಸೂಕ್ತ ಪರಿಹಾರ ಕೈಗೊಳ್ಳುವಲ್ಲಿ ವಿಫಲರಾಗಿದ್ದರಿಂದಲೇ ಇಷ್ಟೊಂದು ಜನ ಸಾವನ್ನಪ್ಪಿದ್ದಾರೆ ಎಂದು ಡೆಮಾಕ್ರಟಿಕ್‌ ಸಂಸದರು ಆರೋಪಿಸಿದ್ದರು. ಇದರ ಬೆನ್ನಲ್ಲೇ ಟ್ವೀಟ್‌ ಮಾಡಿದ್ದ ಟ್ರಂಪ್‌, ಸಾವಿನ ಪ್ರಮಾಣವೂ ನೈಜ ಅಂಕಿಅಂಶಕ್ಕಿಂತ ಐವತ್ತು ಪಟ್ಟು ಹೆಚ್ಚಾಗಿದೆ’ ಎಂದು ಟ್ವೀಟ್‌ ಮಾಡುವ ಮೂಲಕ ಟ್ರಂಪ್ ತಿರುಗೇಟು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.