ADVERTISEMENT

ಪಾರ್ಕ್‌ ಲೇನ್‌, ಥಟ್ಟಾ ನೀರು ಸರಬರಾಜು ಹಗರಣ: ಜರ್ದಾರಿ ದೋಷಿ

ಪಿಟಿಐ
Published 5 ಅಕ್ಟೋಬರ್ 2020, 11:15 IST
Last Updated 5 ಅಕ್ಟೋಬರ್ 2020, 11:15 IST
ಆಸಿಫ್‌ ಅಲಿ ಜರ್ದಾರಿ 
ಆಸಿಫ್‌ ಅಲಿ ಜರ್ದಾರಿ    

ಇಸ್ಲಾಮಾಬಾದ್‌: ಪಾರ್ಕ್‌ ಲೇನ್‌ ಹಾಗೂ ಥಟ್ಟಾ ನೀರು ಸರಬರಾಜು ಹಗರಣಗಳಲ್ಲಿ ಆಸಿಫ್‌ ಅಲಿ ಜರ್ದಾರಿ ಅವರು ದೋಷಿ ಎಂದು ಇಲ್ಲಿನ ಭ್ರಷ್ಟಾಚಾರ ತಡೆ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.

ಪಾಕಿಸ್ತಾನದ ಮಾಜಿ ಅಧ್ಯಕ್ಷರು ಹಾಗೂ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯ (ಪಿಪಿಪಿ) ಸಹ ಸ್ಥಾಪಕರೂ ಆಗಿರುವ 63 ವರ್ಷ ವಯಸ್ಸಿನ ಜರ್ದಾರಿ, ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದರು. ತಾವು ತಪ್ಪು ಮಾಡಿಲ್ಲ ಎಂದು ಪ್ರತಿಪಾದಿಸಿದರು. ಮೂರು ಪ್ರಕರಣಗಳಿಂದಲೂ ತಮ್ಮನ್ನು ಖುಲಾಸೆ ಮಾಡುವಂತೆ ಕೋರಿ ಜರ್ದಾರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು.

ಪಾರ್ಕ್‌ ಲೇನ್‌ ಹಗರಣದಲ್ಲಿ ಇತರ 19 ಹಾಗೂ ಥಟ್ಟಾ ಹಗರಣದಲ್ಲಿ ಇತರ 15 ಮಂದಿಯೂ ದೋಷಿಗಳೆಂದು ನ್ಯಾಯಾಲಯ ಹೇಳಿತು.

ADVERTISEMENT

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜರ್ದಾರಿ ಮತ್ತು ಅವರ ಸಹೋದರಿ ಫರ್ಯಾಲ್‌ ತಾಲ್ಪುರ್‌ ಅವರು ದೋಷಿಗಳೆಂದು ನ್ಯಾಯಾಲಯವು ಹೋದ ವಾರ ಆದೇಶಿಸಿತ್ತು.

ಪಾರ್ಕ್‌ ಲೇನ್‌ ಹಗರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಾಬಾದ್‌ನ ಪ್ರಮುಖ ಪ್ರದೇಶದಲ್ಲಿ ಅತಿ ಕಡಿಮೆ ದರಕ್ಕೆ ಜಾಗ ಖರೀದಿಸಿದ್ದಾರೆಂಬ ಆರೋಪ ಜರ್ದಾರಿ ಮತ್ತು ಅವರ ಪುತ್ರ ಬಿಲಾವಲ್‌ ಅಲಿ ಜರ್ದಾರಿ ಮೇಲಿದೆ. ಥಟ್ಟಾ ನೀರು ಸರಬರಾಜು ಯೋಜನೆಯ ಗುತ್ತಿಗೆಯನ್ನು ಕಾನೂನು ಬಾಹಿರವಾಗಿ ಖಾಸಗಿ ಗುತ್ತಿಗೆದಾರರಿಗೆ ನೀಡಿದ ಆರೋಪವನ್ನೂ ಜರ್ದಾರಿ ಎದುರಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.