
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ
ಜೊಹಾನಸ್‌ಬರ್ಗ್: ಮಾದಕವಸ್ತು ಕಳ್ಳಸಾಗಣೆ ತಡೆ, ಭಯೋತ್ಪಾದನೆ ನಿಯಂತ್ರಣ, ಜಾಗತಿಕ ಆರೋಗ್ಯ ರಕ್ಷಣೆ, ತುರ್ತು ಸ್ಪಂದನಾ ತಂಡ ಸೇರಿದಂತೆ ದಕ್ಷಿಣ ಆಫ್ರಿಕಾದಲ್ಲಿ ಶನಿವಾರ ಆರಂಭಗೊಂಡ ಜಿ-20 ನಾಯಕರ ಶೃಂಗಸಭೆಯ ಆರಂಭಿಕ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಪ್ರಸ್ತಾವಗಳನ್ನು ಇರಿಸಿದ್ದಾರೆ.
‘ಎಲ್ಲರನ್ನೂ ಒಳಗೊಂಡ, ಎಲ್ಲರಿಗೂ ಉತ್ತಮ ಭವಿಷ್ಯವನ್ನು ಖಚಿತಪಡಿಸುವ ಪರಿಸರ ಸಮತೋಲಿತ, ಸಾಂಸ್ಕೃತಿಕವಾಗಿ ಶ್ರೀಮಂತವಾದ ಮತ್ತು ಸಾಮಾಜಿಕವಾಗಿ ಒಗ್ಗಟ್ಟಿನ ‘ಜಾಗತಿಕ ಸಾಂಪ್ರದಾಯಿಕ ಜ್ಞಾನ ಭಂಡಾರ ರಚನೆ‘ಯ ಅಗತ್ಯವನ್ನು ಪ್ರಧಾನಿ ಸಭೆಯಲ್ಲಿ ವಿವರಿಸಿದರು.
‘ನಮ್ಮ ಅಭಿವೃದ್ಧಿಯ ಮಾನದಂಡಗಳನ್ನು ಮರು ಪರಿಶೀಲಿಸಿಕೊಳ್ಳಲು ಇದು ಸಕಾಲ. ಜಾಗತಿಕ ಜ್ಞಾನ ಭಂಡಾರ ರಚನೆಗೆ ಭಾರತದ ನಾಗರಿಕತೆಯ ಮೌಲ್ಯಗಳು ಮತ್ತು ಮಹಾನ್ ಮಾನವತಾವಾದದ ತತ್ವಗಳು ಮಾರ್ಗದರ್ಶಿಯಾಗಿವೆ. ಸುಸ್ಥಿರ ಆರ್ಥಿಕ ಅಭಿವೃದ್ಧಿ ಎಂದರೆ ಅದು ಎಲ್ಲರನ್ನೂ ಒಳಗೊಂಡಿರಬೇಕು, ಯಾರೂ ಹಿಂದುಳಿಯಬಾರದು’ ಎಂದು ಮೋದಿ ಪ್ರತಿಪಾದಿಸಿದರು.
‘ಜಾಗತಿಕ ಅಭಿವೃದ್ಧಿಗೆ, ಆಫ್ರಿಕಾದ ಪ್ರಗತಿಯೂ ಅತ್ಯಗತ್ಯವಾಗಿತ್ತು ಎಂದ ಪ್ರಧಾನಿ, ಆಫ್ರಿಕಾದ ಕೌಶಲ ಅಭಿವೃದ್ಧಿಗೆ, ಜಿ20 ಸಹಯೋಗದಲ್ಲಿ ಯೋಜನೆಯೊಂದನ್ನು ಪ್ರಸ್ತಾಪಿಸಿದರು.
ನೈಸರ್ಗಿಕ ವಿಕೋಪಗಳೂ ಸೇರಿದಂತೆ ಜಾಗತಿಕ ಮಟ್ಟದ ಆರೋಗ್ಯ ತುರ್ತು ಎದುರಾದಾಗ ನಾವು ಒಟ್ಟಿಗೆ, ಕ್ಷಿಪ್ರಗತಿಯಲ್ಲಿ ಕಾರ್ಯನಿರ್ವಹಿಸಬೇಕು. ಇದಕ್ಕಾಗಿ ‘ಜಿ20 ದೇಶಗಳ ಆರೋಗ್ಯ ರಕ್ಷಣೆ ತುರ್ತು ಸ್ಫಂದನಾ ತಂಡವನ್ನು ರಚಿಸಬೇಕು’ ಎಂಬ ಪ್ರಸ್ತಾವನ್ನು ಮೋದಿ ಸಭೆಯಲ್ಲಿ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.