ADVERTISEMENT

ಗಿಲ್ಗಿಟ್‌–ಬಾಲ್ಟಿಸ್ತಾನ್‌ ವಿಧಾನಸಭೆ ಚುನಾವಣೆ, ಬಿಗಿ ಭದ್ರತೆ

ಪಿಟಿಐ
Published 15 ನವೆಂಬರ್ 2020, 12:03 IST
Last Updated 15 ನವೆಂಬರ್ 2020, 12:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ಭಾರತದ ವಿರೋಧದ ನಡುವೆಯೂ ಉತ್ತರ ಪಾಕಿಸ್ತಾನದ ಗಿಲ್ಗಿಟ್‌–ಬಾಲ್ಟಿಸ್ತಾನ್‌ ಪ್ರದೇಶದ ವಿಧಾನಸಭೆಗೆ ಭಾನುವಾರ ಚುನಾವಣೆ ನಡೆದಿದೆ. ಕೋವಿಡ್‌–19 ಕಾರಣದಿಂದಾಗಿ ಮುಂಜಾಗ್ರತೆ ವಹಿಸಲಾಗಿತ್ತು.

ಒಟ್ಟು 24 ಕ್ಷೇತ್ರಗಳಿದ್ದು, ಒಂದು ಕ್ಷೇತ್ರದಲ್ಲಿ ಮತದಾನ ಮುಂದೂಡಲಾಗಿದೆ. 23 ಕ್ಷೇತ್ರಗಳಲ್ಲಿ ನಾಲ್ವರು ಮಹಿಳೆಯರು ಸೇರಿ 330 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ವಿಧಾನಸಭೆಗೆ ಇದು ಮೂರನೇ ಚುನಾವಣೆಯಾಗಿದ್ದು, 577 ಸೂಕ್ಷ್ಮ ಹಾಗೂ 297 ಅತಿ ಸೂಕ್ಷ್ಮ ಮತಗಟ್ಟೆಗಳಿದ್ದು, 15 ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಪಾಕಿಸ್ತಾನ್‌ ಮುಸ್ಲಿಂ ಲೀಗ್‌–ನವಾಜ್‌ (ಪಿಎಂಎಲ್‌–ಎನ್‌), ಪಾಕಿಸ್ತಾನ್ ಪೀಪಲ್ಸ್‌ ಪಾರ್ಟಿ ಪಿಪಿಪಿ) ಹಾಗೂ ಪಾಕಿಸ್ತಾನ್‌ ತೆಹ್ರೀಲ್‌ ಐ ಇನ್ಸಾಫ್‌ (ಪಿಟಿಐ) ಪಕ್ಷದ ನಡುವೆ ನೇರ ಹಣಾಹಣಿ ಇದೆ.

ADVERTISEMENT

ಈ ಪ್ರದೇಶಕ್ಕೆ ಪ್ರಾಂತ್ಯದ ಸ್ಥಾನಮಾನ ನೀಡುವುದು ಈ ಬಾರಿಯ ಚುನಾವಣೆಯ ಪ್ರಮುಖ ವಿಷಯವಾಗಿತ್ತು. ಚುನಾವಣಾ ಪ್ರಚಾರಕ್ಕೆ ಬಂದಿದ್ದ ಪ್ರಧಾನಿ ಇಮ್ರಾನ್‌ ಖಾನ್‌, ಮಧ್ಯಂತರ ಪ್ರಾಂತ್ಯದ ಸ್ಥಾನಮಾನವನ್ನು ಘೋಷಿಸಿದ್ದರು. ಪಿಪಿಪಿ ಮುಖ್ಯಸ್ಥ ಬಿಲ್ವಾಲ್‌ ಜರ್ದಾರಿ ಅವರು ಪೂರ್ಣ ಪ್ರಾಂತ್ಯದ ಸ್ಥಾನಮಾನದ ಭರವಸೆ ನೀಡಿದ್ದರು.

ಚುನಾವಣೆ ನಿರ್ಧಾರ ವಿರೋಧಿಸಿದ್ದ ಭಾರತ

ಗಿಲ್ಗಿಟ್‌–ಬಾಲ್ಟಿಸ್ತಾನ್‌ ವಿಧಾನಸಭೆಗೆ ಚುನಾವಣೆ ನಡೆಸುವ ಪಾಕ್‌ ನಿರ್ಧಾರವನ್ನು ಈ ಹಿಂದೆಯೇ ಭಾರತ ವಿರೋಧಿಸಿತ್ತು. ಈ ಪ್ರದೇಶವನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವುದನ್ನು ಮರೆಮಾಚಲು ಪಾಕಿಸ್ತಾನ ನಡೆಸುತ್ತಿರುವ ಪ್ರಯತ್ನ ಇದು ಎಂದು ಭಾರತ ಟೀಕಿಸಿತ್ತು. ಸೇನೆ ಆಕ್ರಮಿತ ಪ್ರದೇಶದ ಸ್ಥಿತಿಗತಿಯನ್ನು ಬದಲಾಯಿಸುವ ಪಾಕಿಸ್ತಾನದ ಪ್ರಯತ್ನಕ್ಕೆ ಕಾನೂನು ಆಧಾರವಿಲ್ಲ’ ಎಂದು ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್‌ ಶ್ರೀವಾಸ್ತವ ಕಳೆದ ಸೆಪ್ಟೆಂಬರ್‌ನಲ್ಲಿ ಹೇಳಿದ್ದರು.

‘ಗಿಲ್ಗಿಟ್‌–ಬಾಲ್ಟಿಸ್ತಾನ್‌ ಸೇರಿದಂತೆ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಎಲ್ಲ ಭಾಗಗಳೂ ಭಾರತದ ಅವಿಭಾಜ್ಯ ಅಂಗ. ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಶ್ರೀವಾಸ್ತವ್‌ ಪ್ರತಿಪಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.