ADVERTISEMENT

ಗ್ರ್ಯಾಮಿ 2019: ಮಹಿಳಾ ಸಂಗೀತಗಾರರ ಕಲರವ

ಪಿಟಿಐ
Published 11 ಫೆಬ್ರುವರಿ 2019, 19:02 IST
Last Updated 11 ಫೆಬ್ರುವರಿ 2019, 19:02 IST
ಸಮಾರಂಭದಲ್ಲಿ ಪ್ರದರ್ಶನ ನೀಡಿದ ಲೇಡಿ ಗಾಗಾ –ಎಎಫ್‌ಪಿ ಚಿತ್ರ
ಸಮಾರಂಭದಲ್ಲಿ ಪ್ರದರ್ಶನ ನೀಡಿದ ಲೇಡಿ ಗಾಗಾ –ಎಎಫ್‌ಪಿ ಚಿತ್ರ   

ಲಾಸ್ ಏಂಜಲೀಸ್ : ಗ್ರ್ಯಾಮಿ ಅವಾರ್ಡ್ಸ್ 2019ರ ಸಮಾರಂಭದಲ್ಲಿ ಮಹಿಳಾ ಸಂಗೀತಗಾರರದ್ದೇ ಕಲರವ. ಕೇಸಿ ಮಸ್‌ಗ್ರೇವ್ಸ್‌, ಕಾರ್ಡಿ ಬಿ ಹಾಗೂ ಲೇಡಿ ಗಾಗಾ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿರುವುದಲ್ಲದೆ, 14 ವರ್ಷಗಳ ನಂತರದಲ್ಲಿ ಮಹಿಳೆಯೊಬ್ಬರು ಈ ಸಮಾರಂಭದ ನಿರೂಪಣೆ ವಹಿಸಿಕೊಂಡಿದ್ದು ಸಹ ಇದೇ ಮೊದಲಾಗಿತ್ತು. ಪ್ರದರ್ಶನ ನೀಡಿದವರಲ್ಲೂ ಮಹಿಳೆಯರು ಪ್ರಮುಖರಾಗಿದ್ದರು.

ಮಹಿಳೆಯರಿಗೆ ಗ್ರ್ಯಾಮಿ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಸಾಕಷ್ಟು ಪ್ರಾತಿನಿಧ್ಯ ನೀಡುತ್ತಿಲ್ಲ ಎಂದು ರೆಕಾರ್ಡಿಂಗ್ ಅಕಾಡೆಮಿ ಕುರಿತು ಕಳೆದ ವರ್ಷ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಈ ಬಾರಿ ಸ್ಪರ್ಧೆಯಲ್ಲಿ, ಪ್ರದರ್ಶನದಲ್ಲಿ ಹಾಗೂ ನಿರೂಪಣೆಯಲ್ಲಿಯೂ ಮಹಿಳೆಯರಿಗೆ ಪ್ರಾಮುಖ್ಯತೆ ನೀಡುವ ಮೂಲಕ ಅಕಾಡೆಮಿ ಬದಲಾವಣೆ ಮಾಡಿರುವಂತಿದೆ.

ನಿರೂಪಕಿಅಲಿಸಿಯಾ ಕೀಸ್‌,ತಮ್ಮ ‘ಸಹೋದರಿಯರಾದ’ ಅಮೆರಿಕದ ಮಾಜಿ ಮೊದಲ ಮಹಿಳೆ ಮಿಶೆಲ್ ಒಬಾಮ, ಗಾಗಾ, ಜೆನಿಫರ್ ಲೋಪೆಜ್ ಹಾಗೂ ಜೇಡ ಪಿಂಕೆಟ್ ಸ್ಮಿತ್ ಅವರನ್ನು ವೇದಿಕೆಗೆ ಆಹ್ವಾನಿಸಿದ್ದು ವಿಶೇಷವಾಗಿತ್ತು.

ADVERTISEMENT

ಮಸ್‌ಗ್ರೇವ್ಸ್‌ ಅವರು ವರ್ಷದ ಆಲ್ಬಂ, ಉತ್ತಮ ದೇಶೀ ಆಲ್ಬಂ, ಉತ್ತಮ ದೇಶೀ ಹಾಡು ಹಾಗೂ ಉತ್ತಮ ಏಕವ್ಯಕ್ತಿ ಪ್ರದರ್ಶನ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ಬ್ರ್ಯಾಂಡಿ ಕಾರ್ಲಿಲ್, ಡ್ರೇಕ್, ಬ್ಲ್ಯಾಕ್ ಪ್ಯಾಂಥರ್, ಪೋಸ್ಟ್ ಮೆಲನ್, ಜೆನಲ್ ಮೊನೆ ಅವರ ಆಲ್ಬಂಗಳು ಸ್ಪರ್ಧೆಯಲ್ಲಿದ್ದವು.

‘ಅಂತಹ ಪ್ರಸಿದ್ಧ ಆಲ್ಬಂಗಳ ಜತೆಯಲ್ಲಿ ಸ್ಪರ್ಧೆಯಲ್ಲಿದ್ದುದೇ ನಂಬಲಾಗದ ರೀತಿ ಇತ್ತು. ಇದು ಆಶ್ಚರ್ಯ...ನಾನು ಕೃತಜ್ಞಳಾಗಿದ್ದೇನೆ. ಕಲೆ ನಿಜಕ್ಕೂ ಬೆಳೆಯುತ್ತಿದೆ. ಇದನ್ನು ನೋಡಲು ಸಂತಸವಾಗುತ್ತದೆ. ಹಾಡಲ್ಲದೆ ನನ್ನ ಬಳಿ ಏನೂ ಇಲ್ಲ. ಅದೇ ನನಗೆ ಎಲ್ಲ’ ಎಂದು ಮಸ್‌ಗ್ರೇವ್ಸ್‌ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

‘ಇನ್ವೇಷನ್ ಆಫ್ ಪ್ರೈವೆಸಿ’ಗೆಉತ್ತಮ ರ್‍ಯಾ‍ಪ್ ಆಲ್ಬಂ ಪ್ರಶಸ್ತಿ ಗಳಿಸುವ ಮೂಲಕ ಈ ವಿಭಾಗದಲ್ಲಿ ಗೆಲುವು ಪಡೆದ ಮೊದಲ ಮಹಿಳೆ ಎಂದು ಇತಿಹಾಸ ಸೃಷ್ಟಿಸಿದ್ದಾರೆ.

ಲೇಡಿ ಗಾಗಾ ಉತ್ತಮ ಪಾಪ್ ಪ್ರದರ್ಶನ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ಅಲ್ಲದೆ ಬ್ರ್ಯಾಡ್ಲಿ ಕೂಪರ್ ಅವರೊಂದಿಗೆ ಉತ್ತಮ ಪಾಪ್ ಜೋಡಿ ಪ್ರದರ್ಶನಕ್ಕಾಗಿ ಪ್ರಶಸ್ತಿ ಹಂಚಿಕೊಂಡಿದ್ದಾರೆ.

ರ್‍ಯಾಪರ್–ಹಾಡುಗಾರ ಡ್ರೇಕ್ ಅವರು ಉತ್ತಮ ರ್‍ಯಾಪ್ ಹಾಡು ವಿಭಾಗದಲ್ಲಿ ಪ್ರಶಸ್ತಿ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.